ಬೆಂಗಳೂರು: ಡೇ ಕೇರ್ ಸೆಂಟರ್ನಲ್ಲಿ ಮಕ್ಕಳನ್ನು ಬಿಡುವ ಮುನ್ನ ಪಾಲಕರು ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಬಹಳಷ್ಟಿದೆ. ಇದೀಗ ಸುಬ್ರಹ್ಮಣ್ಯಪುರದಲ್ಲಿರುವ ಪ್ಲೇ ಸ್ಕೂಲ್ ಒಂದರಲ್ಲಿ ಕರುಳು ಚುರುಕ್ ಎನ್ನುವಂತಹ ಘಟನೆಯೊಂದು ನಡೆದಿದೆ. ಸದ್ಯ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯ ನೋಡಿದರೆ ನೀವೂ ಕೂಡ ನಿಮ್ಮ ಮಕ್ಕಳನ್ನು ಮಕ್ಕಳನ್ನು ಡೇ ಕೇರ್ ಸೆಂಟರ್ನಲ್ಲಿ ಬಿಟ್ಟು ಹೋಗಲು ಹೆದರುವಂತಿದೆ.
ಸುಬ್ರಹ್ಮಣ್ಯಪುರದಲ್ಲಿರುವ ಡೇ ಕೇರ್ ಸೆಂಟರ್ನಲ್ಲಿ ಸಣ್ಣ ಮಗುವೊಂದು, ಇನ್ನೊಂದು ಮಗುವಿಗೆ ಹೊಡೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗುತ್ತಿದೆ. ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದ ಆಯಾ, ಮಗುವೊಂದನ್ನು ಕೋಣೆಯಿಂದ ಹೊರಗೆ ಕರೆದುಕೊಂಡು ಹೋಗುತ್ತಾರೆ. ಈ ವೇಳೆ ಒಂದು ಮಗು ಸಹಪಾಠಿ ಮೇಲೆ ಬಲವಾಗಿ ಹಲ್ಲೆ ಮಾಡಿದೆ. ಪ್ಲೇ ಸ್ಕೂಲ್ನ ಸಿಬ್ಬಂದಿಯ ತಪ್ಪಿನಿಂದ ಈ ಘಟನೆ ಸಂಭವಿಸಿದೆ.
ಡೇ ಕೇರ್ ಸೆಂಟರ್ನ ಆಯಾ ನಿರ್ಲಕ್ಷ್ಯ ವಹಿಸಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ. ನಾಲ್ಕೈದು ನಿಮಿಷ ಮಕ್ಕಳಿಬ್ಬರು ಜಗಳ ಮಾಡಿಕೊಂಡಿದ್ದು, ಈ ವೇಳೆ ಜವಾಬ್ದಾರಿ ಹೊಂದಿದ್ದ ಆಯಾ ಇತ್ತ ಗಮನ ಹರಿಸಿಲ್ಲ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪಾಲಕರು ಕೇರ್ ಸೆಂಟರ್ ವಿರುದ್ಧ ಗಲಾಟೆ ಮಾಡಿದ್ದಾರೆ. ಬಳಿಕ ಟ್ವಿಟರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ.
ಪಾಲಕರ ಮನವಿಗೆ ಟ್ವಿಟರ್ ಮೂಲಕ ಬೆಂಗಳೂರು ನಗರ ಪೊಲೀಸರು ಸ್ಪಂದಿಸಿದ್ದಾರೆ. ನಿಮ್ಮ ದೂರನ್ನು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಿಗೆ ರವಾನಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಘಟನೆ ಬಗ್ಗೆ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಮಕ್ಕಳನ್ನು ಡೇ ಕೇರ್ ಸೆಂಟರ್ಗೆ ಕಳುಹಿಸುವ ಮುನ್ನ ಪಾಲಕರು ಸಾಕಷ್ಟು ಯೋಚಿಸಬೇಕು. ಸೆಂಟರ್ಗಳ ಹಿನ್ನೆಲೆ ಪರಿಶೀಲಿಸಿ ಮಕ್ಕಳನ್ನು ಕಳುಹಿಸಿಬೇಕು ಎಂಬ ಅಭಿಪ್ರಾಯಗಳು ಜಾಲತಾಣಗಳ ಮೂಲಕ ವ್ಯಕ್ತವಾಗುತ್ತಿವೆ.