ನ್ಯೂಸ್

ಬೆಂಗಳೂರು ಕ್ರಿಕೆಟ್ ತಂಡಕ್ಕೆ ಶುಭಕೋರಿದ ಹಿರಿಯ ಪತ್ರಕರ್ತರು

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜ.೬-೭ ರಂದು ಮಂಗಳೂರಿನಲ್ಲಿ ಆಯೋಜಿಸಲಾಗುತ್ತಿರುವ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ತಂಡಕ್ಕೆ ಬುಧವಾರ ಹಿರಿಯ ಪತ್ರಕರ್ತರು ಶುಭಕೋರಿದರು.


ರಾಜ್ಯ ಕಾರ್ಯನಿರತ ಪರ್ತಕರ್ತರ ಸಂಘ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿದೆ. ಪಂದ್ಯಾವಳಿಗೆ ರಾಜ್ಯದ ೨೪ ಜಿಲ್ಲಾ ತಂಡಗಳು ಪಾಲ್ಗೊಳ್ಳುತ್ತಿವೆ. ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ತಂಡವು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದು, ತಂಡದ ಸದಸ್ಯರಿಗೆ ಹಿರಿಯ ಪತ್ರಕರ್ತರು ಬುಧವಾರ ಜೆರ್ಸಿ ಹಾಗೂ ಶೂ ವಿತರಿಸಿ ಶುಭಕೋರಿದರು.


ಈ ವೇಳೆ ರಾಜ್ಯ ಕಾರ್ಯನಿರತ ಪರ್ತಕರ್ತರ ಸಂಘ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಆಟದಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯ. ಆದರೆ, ಪಾಲ್ಗೊಳ್ಳುವಿಕೆ ಮುಖ್ಯ. ಪತ್ರಕರ್ತರು ವೃತ್ತಿಯ ಜತೆಗೆ ಇತರ ಚಟುವಟಿಕೆಯಲ್ಲಿ ತೊಡಗುವುದು ತುಂಬ ಸಂಸತದಾಯಕ ವಿಷಯ. ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘದ ತಂಡ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಲಿ ಎಂದು ಆಶಿಸಿದರು.


ಪ್ರೆಸ್‌ಕ್ಲಬ್ ಅಧ್ಯಕ್ಷ ಶ್ರೀಧರ್ ಮಾತನಾಡಿ, ಪತ್ರಕರ್ತರು ಕೇವಲ ಸುದ್ದಿಯ ಹಿಂದೆಯೇ ಓಡುತ್ತಾ, ಜನರಿಗೆ ಜಗತ್ತಿನಲ್ಲಾಗುವ ಆಗುಹೋಗುಗಳನ್ನು ತಿಳಿಸುವುದರಲ್ಲೇ ಕಾಲಕಳೆಯುತ್ತಾರೆ. ಆದರೆ, ಕ್ರಿಕೆಟ್ ಪಂದ್ಯಾವಳಿ ಸೇರಿ ಇನ್ನಿತರ ಚಟುವಟಿಕೆಗಳು ಅವರ ಕಾರ್ಯದೊತ್ತಡ ನಿವಾರಣೆ ಮಾಡಲಿವೆ. ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಬಲಿಷ್ಠ ತಂಡವಾಗಿದ್ದು, ಟ್ರೋಫಿಯೊಂದಿಗೆ ಮರಳಲಿ ಎಂದು ಆಶಿಸುತ್ತೇನೆ ಎಂದರು.


ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಪಾಳ್ಯ, ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸೋಮಶೇಖರ ಗಾಂಧಿ, ಹಿರಿಯ ಪತ್ರಕರ್ತರಾದ ವೈಎಸ್‌ಎಲ್ ಸ್ವಾಮಿ, ನಂಜುಂಡಪ್ಪ, ಧ್ಯಾನ್ ಪೂಣಚ್ಚ ಸೇರಿದಂತೆ ತಂಡದ ಆಟಗಾರರಿದ್ದರು. ತಂಡ ಸದಸ್ಯರಿಗೆ ಅಗತ್ಯವಿರುವ ಆಟದ ಪರಿಕರಗಳನ್ನು ರಾಘವೇಂದ್ರ ಘಂಗಟಕರ್ ಹಾಗೂ ಪ್ರವೀಣ್ ಕೊಡುಗೆಯಾಗಿ ನೀಡಿದರು.