ನ್ಯೂಸ್

ಹಿರಿಯ ವಕೀಲ, ಲೇಖಕ, ರಾಜಕಾರಣಿ, ಮಾಜಿ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಇನ್ನಿಲ್ಲ

ಉತ್ತರ ಪ್ರದೇಶ: ಬಿಜೆಪಿಯ ಹಿರಿಯ ನಾಯಕ, ಮಾಜಿ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ(88)ಅವರು ಭಾನುವಾರ ಮುಂಜಾನೆ ನಿಧನರಾದರು.

1934ರ ನವೆಂಬರ್ 10ರಂದು ಅಲಹಾಬಾದ್‌ನಲ್ಲಿ ಜನಿಸಿದ ಕೇಸರಿನಾಥ್ ತ್ರಿಪಾಠಿ ಅವರು ರಾಜಕಾರಣಕ್ಕೆ ಬರುವ ಮೊದಲು ಅಲಹಾಬಾದ್​ ಹೈಕೋರ್ಟ್​ನಲ್ಲಿ ಹಿರಿಯ ವಕೀಲರಾಗಿದ್ದರು. ಲೇಖಕರು, ಕವಿಯೂ ಆಗಿರುವ ತ್ರಿಪಾಠಿ ಅವರು ಬಿಹಾರ, ಮೇಘಾಲಯ ಮತ್ತು ಮಿಜೋರಾಂ ರಾಜ್ಯಗಳ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು. ಉತ್ತರ ಪ್ರದೇಶ ರಾಜ್ಯದ ಬಿಜೆಪಿ ಅಧ್ಯಕ್ಷರೂ ಆಗಿದ್ದರು. 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ತ್ರಿಪಾಠಿ ಅವರು 1977 ರಿಂದ 1979 ರವರೆಗೆ ಹಣಕಾಸು ಸಚಿವರಾಗಿದ್ದರು. 3 ಬಾರಿ ಉತ್ತರಪ್ರದೇಶ ವಿಧಾನಸಭೆಯ ಸ್ಪೀಕರ್ ಆಗಿದ್ದರು.

2 ಬಾರಿ ಕರೊನಾ ಸೋಂಕಿಗೆ ಒಳಗಾಗಿದ್ದ ತ್ರಿಪಾಠಿ ಅವರು ಲಕ್ನೋದ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕರೊನಾ ವಿರುದ್ಧ ಗೆದ್ದು ಬಂದಿದ್ದರು. ಡಿಸೆಂಬರ್‌ನಲ್ಲಿ ಜಾರಿ ಬಿದ್ದು ಕೈ ಮುರಿದುಕೊಂಡಿದ್ದರು. ಆಗ ಉಸಿರಾಟ ಸಮಸ್ಯೆಯೂ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಹಾರ ಸೇವನೆ ನಿಲ್ಲಿಸಿದ್ದರು. ಮೂತ್ರವಿಸರ್ಜನೆ ಸಮಸ್ಯೆಯೂ ಉಂಟಾಗಿತ್ತು. ಐಸಿಯುನಲ್ಲಿ ಒಂದು ವಾರ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮನೆಗೆ ಕರೆತರಲಾಗಿತ್ತು. ಇಂದು ಮುಂಜಾನೆ ಉತ್ತರ ಪ್ರದೇಶದ ಪ್ರಯಾಗರಾಜ್‌ ನಗರದ ಮನೆಯಲ್ಲಿ ಕೊನೆಯುಸಿರೆಳೆದರು. (ಏಜೆನ್ಸೀಸ್)