ನ್ಯೂಸ್

ಹಿರಿಯ ನಟಿ ಬಿ. ಶಾಂತಮ್ಮ ನಿಧನ

manjunathktgns

ಮೈಸೂರು: ಸ್ಯಾಂಡಲ್​ವುಡ್​ನ ಹಿರಿಯ ನಟಿ ಬಿ. ಶಾಂತಮ್ಮ(95) ನಿಧನರಾಗಿದ್ದಾರೆ. ಭಾನುವಾರ ಸಂಜೆ 5.45ರ ಸುಮಾರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಮೂವರು ಮಕ್ಕಳಿದ್ದು, ಕಳೆದ ಹಲವು ವರ್ಷಗಳಿಂದ ಮೈಸೂರಿನಲ್ಲಿಯೇ ನಟಿ ಶಾಂತಮ್ಮ ವಾಸವಾಗಿದ್ದರು.

ಕನ್ನಡ ಚಿತ್ರರಂಗದಲ್ಲಿ 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಶಾಂತಮ್ಮ , ಚಿನ್ನಾರಿ ಮುತ್ತ, ಚಂದವಳ್ಳಿ ತೋಟ, ಕೆಂಡದ ಮಳೆ, ಬಾಂಬೆ ದಾದಾ, ಗಜೇಂದ್ರ, ಶ್ರುತಿ ಸೇರಿದಾಗ, ಇಂದಿನ ಭಾರತ. ಲಾಕ್​ಅಪ್​ ಡೆತ್​, ರೂಪಾಯಿ ರಾಜ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು.

ರಂಗಭೂಮಿ ಹಿನ್ನೆಲೆಯಿಂದ ಬಂದ ಶಾಂತಮ್ಮ, ಡಾ. ರಾಜ್​ ಕುಮಾರ್ ಅವರ ಹಲವು ಸಿನಿಮಾಗಳಲ್ಲಿಯೂ ನಟಿಸಿದ್ದರು. ಬಿ. ಜಯಮ್ಮ ಅವರ ಸಂಬಂಧಿಯೂ ಆಗಿದ್ದರು. ಪಾರ್ವತಮ್ಮ ರಾಜ್​ಕುಮಾರ್ ನಿಧನದ ಬಳಿಕ ಮೈಸೂರಿನ ಮಕ್ಕಳ ಮನೆಯಲ್ಲಿ ವಾಸವಾಗಿದ್ದರು.

ನಟಿ ಶಾಂತಮ್ಮ ಸಾವಿನ ಸುದ್ದಿಯನ್ನು ಹಿರಿಯ ನಟ ದೊಡ್ಡಣ್ಣ ಖಚಿತಪಡಿಸಿದ್ದಾರೆ. ಇನ್ನುಳಿದಂತೆ ಹಿರಿಯ ನಟಿಯ ಸಾವಿಗೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದು, ಸೋಮವಾರ ಅಂತ್ಯಸಂಸ್ಕಾರ ನಡೆಯಲಿದೆ.