ನ್ಯೂಸ್

ಉತ್ತರಪ್ರದೇಶ: ರಾಷ್ಟ್ರೀಯ ಹೆದ್ದಾರಿ ಬಳಿ ಮಹಿಳೆಯ ರುಂಡವಿಲ್ಲದ ನಗ್ನ ದೇಹ ಪತ್ತೆ, ಪೊಲೀಸರಿಗೂ ಸವಾಲಾದ ಪ್ರಕರಣ

ಲಕ್ನೋ: ಉತ್ತರ ಪ್ರದೇಶದ ಕಾನ್ಪುರ-ದೆಹಲಿ ಹೆದ್ದಾರಿಯಲ್ಲಿ ಮಹಿಳೆಯೊಬ್ಬರ ರುಂಡವಿಲ್ಲದ ಅರೆಬೆತ್ತಲೆ ಶವ ಪತ್ತೆಯಾಗಿದ್ದು. ಘಟನೆ ಸಂಭವಿಸಿ 24 ಗಂಟೆ ಕಳೆದರೂ ಮಹಿಳೆಯ ಬಗ್ಗೆ ಯಾವ ಗುರುತು ಪತ್ತೆಯಾಗಿಲ್ಲ.

ಉತ್ತರ ಪ್ರದೇಶದ ಕಾನ್ಪುರದ ಗುಜೈನಿ ಎಂಬಲ್ಲಿ ಬುಧವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ರುಂಡವಿಲ್ಲದ ಮಹಿಳೆಯ ಶವವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಮಹಿಳೆಯ ಗುರುತನ್ನು ಪತ್ತೆ ಹಚ್ಚವುದಕ್ಕೆ ಪೊಲೀಸರು ಆಸುಪಾಸಿನಲ್ಲಿರುವ ಸಿಸಿಟಿವಿಯನ್ನು ಕ್ಯಾಮೆರಾವನ್ನು ಪರಿಶೀಲಿಸಿದ್ದಾರೆ.

ಘಟನೆ ಕುರಿತು ಮಾತನಾಡಿದ ಉಪ ಪೊಲೀಸ್ ಆಯುಕ್ತ (ದಕ್ಷಿಣ) ರವೀಂದರ್ ಕುಮಾರ್, ಮೃತ ಮಹಿಳೆಯ ಮೂಳೆಗಳು ಮತ್ತು ಹಲ್ಲುಗಳು ಮುರಿದಿವೆ. ಮೃತದೇಹದ ಬಳಿ ಯಾವುದೇ ಮೊಬೈಲ್ ಫೋನ್, ಬ್ಯಾಗ್ ಅಥವಾ ಗುರುತಿನ ಚೀಟಿ ಪತ್ತೆಯಾಗಿಲ್ಲ. ಈ ಪ್ರಕರಣದ ತನಿಖೆಗಾಗಿ ಮೂರು ತಂಡಗಳನ್ನು ರಚಿಸಲಾಗಿದ್ದು, ಶವ ಪತ್ತೆಯಾದ ಸ್ಥಳದಲ್ಲಿ ಯಾವುದೇ ಸಿಸಿ ಕ್ಯಾಮೆರಾಗಳು ಇಲ್ಲ ಎಂದು ತಿಳಿಸಿದ್ದಾರೆ.

ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದೇಹದ ಮೇಲೆ ಮೊಂಡಾದ ವಸ್ತುವಿನ ಗುರುತುಗಳಿವೆ. ನಾವು ಈ ಪ್ರಕರಣವನ್ನು ಕೊಲೆ ಮತ್ತು ಅಪಘಾತದ ದೃಷ್ಟಿಯಿಂದ ತನಿಖೆ ಮಾಡುತ್ತಿದ್ದೇವೆ" ಎಂದು ಡಿಸಿಪಿ ಕುಮಾರ್ ಹೇಳಿದ್ದಾರೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಪೊಲೀಸರು ಹೆದ್ದಾರಿಯ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.