ಶಿವಮೊಗ್ಗ: ಕುವೆಂಪು ವಿವಿ ಪದವಿಯ ಕೊನೆಯ ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ಪದವಿ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಕೊನೆಯ ಸೆಮಿಸ್ಟರ್ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವೇಳಾಪಟ್ಟಿ ಪ್ರಕಾರ ಆ.30ರಿಂದ ಸೆ.9ರವರೆಗೆ ಪರೀಕ್ಷೆಗಳು ನಡೆಯುತ್ತವೆ. ಕೇವಲ 10 ದಿನಗಳಲ್ಲಿ ಅಷ್ಟೂ ವಿಷಯಗಳಲ್ಲಿ ಸಿದ್ದತೆ ಮಾಡಿಕೊಳ್ಳುವುದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಹಿಂದಿನ ಸೆಮಿಸ್ಟರ್‌ಗಳಲ್ಲಿ ಬಾಕಿ ಉಳಿಸಿಕೊಂಡಿರುವ ವಿಷಯಗಳನ್ನೂ ಬರೆಯಬೇಕಿರುವುದರಿಂದ ಸಮಸ್ಯೆಯಾಗುತ್ತದೆ. ಇದರ ನಡುವೆ ಆ.14ರಿಂದ 26ರವರೆಗೆ ಪ್ರಾಯೋಗಿಕ ಪರೀಕ್ಷೆಗಳೂ ನಡೆಯಲಿವೆ. ಇದರಿಂದ ವಿದ್ಯಾರ್ಥಿಗಳಿಗೆ ಒತ್ತಡ ಉಂಟಾಗುತ್ತದೆ. ಹೀಗಾಗಿ ಕನಿಷ್ಠ 10 ದಿನಗಳವರೆಗೆ ಪರೀಕ್ಷೆ ಮುಂದೂಡಬೇಕು. ಪ್ರತಿ ವಿಷಯಕ್ಕೂ ಮೂರ‌್ನಾಲ್ಕು ದಿನ ಅಂತರವಿರಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು. ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಎಂ.ಚಿನ್ಮಯ್, ತಾಲೂ ಅಧ್ಯಕ್ಷ ಅಜಿತ್, ಪ್ರಮುಖರಾದ ಕೇಶವ್, ದರ್ಶನ್ ಮುಂತಾದವರಿದ್ದರು.