ಬೆಂಗಳೂರು: ಹೈಡ್ರೋ ಗಾಂಜಾವನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಮೂಲದ ತವನೀಶ್ ಬಂಧಿತ. ಆರೋಪಿಯಿಂದ ೧.೨೨ ಕೋಟಿ ರೂ.ಮೌಲ್ಯದ ೨. ೭೭೯ ಕೆ.ಜಿ ಹೈಡ್ರೋ ಗಾಂಜಾ, ತೂಕದ ಯಂತ್ರ ೩೭೦೦ ರೂ.ನಗದು ಜಪ್ತಿ ಮಾಡಲಾಗಿದೆ. ಅಲ್ಲದೇ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯು ಹಿಮಾಚಲ ಪ್ರದೇಶಕ್ಕೆ ಆಗಾಗ್ಗೆ ಡಿ.ಜೆ ಪಾರ್ಟಿ ಮಾಡಲು ಹೋಗುತ್ತಿದ್ದಾಗ ಆ ವೇಳೆ ಕೇರಳ ಮೂಲದ ಸೈಜು ಎಂಬಾತನ ಪರಿಚಯವಾಗಿದ್ದು, ಈತ ಥೈಲ್ಯಾಂಡ್‌ನಿಂದ ಹೈಡ್ರೋ ಗಾಂಜಾವನ್ನು ಪಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿ, ಬೇಕರಿ ತಿನಿಸುಗಳ ಬಾಕ್ಸ್‌ಗಳಲ್ಲಿ ತುಂಬಿ ಅವುಗಳನ್ನು ಬಿಸ್ಕೆಟ್, ಚಾಕಲೇಟ್ ಎಂದು ಬಿಂಬಿಸಿ ವಿಮಾನದ ಮೂಲಕ ಬೆಂಗಳೂರಿಗೆ ತರಿಸಿಕೊಳ್ಳುತ್ತಿದ್ದ. ಆತನಿಂದ ಆರೋಪಿ ತವನೀಶ್ ಹೈಡ್ರೋ ಗಾಂಜಾ ಪಡೆದು ಪರಿಚಿತ ಗ್ರಾಹಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಆರೋಪಿಯು ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾಮಾನ್ಯನಗರದಲ್ಲಿರುವ ಕಾಲೇಜು ಬಳಿ ಹೈಡ್ರೋ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಜಾಲದಲ್ಲಿ ವಾಸವಿದ್ದ ತವನೀಶ್ ಮೇಲ್ನೋಟಕ್ಕೆ ಬಟ್ಟೆ ವ್ಯಾಪಾರ ಮಾಡುತ್ತಿದ್ದ. ಆದರೆ ಮುಖ್ಯವಾಗಿ ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದ. ಒಂದು ವರ್ಷದ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ಸೈಜುವಿನಿಂದ ಏರ್ಪೋರ್ಟ್‌ನಲ್ಲಿ ಯಾಮಾರಿಸಿ ಹೈಡ್ರೋ ಗಾಂಜಾ ತರಸಿಕೊಳುತ್ತಿದ್ದ. ಹೈಡ್ರೋ ಗಾಂಜಾವನ್ನು ಸಿಂಥೆಟಿಕ್ ಪೇಪರ್‌ನಲ್ಲಿ ಸುತ್ತಿ ಬಿಸ್ಕೆಟ್, ಚಾಕಲೇಟ್ ಬಾಕ್ಸ್‌ನಲ್ಲಿ ಅದನ್ನು ಇಡಲಾಗುತ್ತಿತ್ತು. ಸ್ಕ್ಯಾನ್ ಮಾಡಿದಾಗಲೂ ಗಾಂಜಾ ಇದೆ ಅಂತ ಗೊತ್ತಾಗುತ್ತಿರಲಿಲ್ಲ. ಬೆಂಗಳೂರಿನ ನಾಲ್ಕು ಠಾಣೆಯಲ್ಲಿ ಆರೋಪಿ ತವನೀಶ್ ವಿರುದ್ಧ ಈ ಹಿಂದೆ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.