ನ್ಯೂಸ್

ಆಂಧ್ರದ ಬಂದರಿನಲ್ಲಿ ದಾಸ್ತಾನಿರುವ ಮರಳನ್ನು ಅಲ್ಲೇ ಮಾರಾಟ ಮಾಡಿ, ರಾಜ್ಯ ಬೊಕ್ಕಸಕ್ಕಾಗಿರುವ ನಷ್ಟ ತಗ್ಗಿಸಿ: ಎಎಪಿ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಮರಳು ಕೊರತೆ ನೀಗಿಸುವ ಸಲುವಾಗಿ ಮಲೇಷ್ಯಾದಿಂದ ಆಮದು ಮಾಡಿಕೊಂಡಿದ್ದ ಮರಳನ್ನು ತೆರವುಗೊಳಿಸದೆ 7 ವರ್ಷಗಳಿಂದ ಆಂಧ್ರ ಪ್ರದೇಶದ ಕೃಷ್ಣ ಪಟ್ಟಣಂ ಬಂದರಿನಲ್ಲಿ ದಾಸ್ತಾನು ಇರಿಸಿದ್ದರ ಪರಿಣಾಮ ₹76 ಕೋಟಿ ದಾಸ್ತಾನು ಶುಲ್ಕ ಪಾವತಿ ಮಾಡಬೇಕಾಗಿರುವುದು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯಾಗಿದೆ. ಅನಗತ್ಯವಾಗಿ ರಾಜ್ಯ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಆಮದು ಮಾಡಿಕೊಂಡ ದಾಸ್ತಾನನ್ನು ಸರಿಯಾದ ರೀತಿಯಲ್ಲಿ ಏಕೆ ವಿಲೇವಾರಿ ಮಾಡಲಿಲ್ಲ? ಯಾವ ಕಾರಣಕ್ಕಾಗಿ 7 ವರ್ಷಗಳಿಂದ ಅದಾನಿ ಪೋರ್ಟ್ಸ್ ಕಂಪನಿಯ ಒಡೆತನದಲ್ಲಿರುವ ಬಂದರಿನಲ್ಲಿ ಬಾಕಿ ಇರಿಸಲಾಗಿತ್ತು? ಎಂಬುದರ ಬಗ್ಗೆ ತನಿಖೆಯಾಗಬೇಕು. ಜನರ ತೆರಿಗೆ ಹಣವನ್ನು ಹೀಗೆ ಬೇಕಾಬಿಟ್ಚಿ ನಷ್ಟಗೊಳಿಸುತ್ತಿರುವುದು ಸರಿಯಲ್ಲ ಎಂಬುದರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಒಂದೆಡೆ 89 ಸಾವಿರ ಟನ್ ಮರಳು ವ್ಯರ್ಥವಾಗಿದ್ದಲ್ಲದೆ ಮೂರು ಪಟ್ಟು ದಂಡ ಕಟ್ಟುವ ಸ್ಥಿತಿ ಬಂದಿದೆ. ಜನರ ತೆರಿಗೆ ಹಣವನ್ನು ನಷ್ಟ ಮಾಡಿದಂತಾಗಿದೆ. ಎಂಎಸ್‌ಐಎಲ್‌ಗೆ ಮರಳಿನಿಂದ ಕೇವಲ ₹68 ಲಕ್ಷ ಅಸಲು ಸಿಕ್ಕಿದೆ. 2017ರಲ್ಲಿ ರಾಜ್ಯ ಸರ್ಕಾರದ ನೇತೃತ್ವ ವಹಿಸಿದ್ದವರು ನೀವೇ. ಈಗಲೂ ನೀವೇ ಮುಖ್ಯಮಂತ್ರಿಯಾಗಿದ್ದೀರಿ. ಇಂತಹ ನಿರ್ಲಕ್ಷ್ಯವಾಗಿದ್ದು ಹೇಗೆ? ಇದಕ್ಕೆ ಯಾರು ಕಾರಣಕರ್ತರು ಎಂಬುದನ್ನು ಖುದ್ದಾಗಿ ತನಿಖೆ ನಡೆಸಿ ಎಂದು ಒತ್ತಾಯಿಸಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಮರಳಿಗೆ ಬೇಡಿಕೆ ಇಲ್ಲದಿರುವುದರಿಂದ ಕೃಷ್ಣಪಟ್ಟಣಂ ಬಂದರಿನಲ್ಲೇ ಉಳಿದಿರುವ ಮರಳನ್ನು ಅಲ್ಲೇ ಮಾರಾಟ ಮಾಡುವ ಮೂಲಕ ನಷ್ಟ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯದೊಳಗೆ ಮಾತ್ರ ಮಾರಾಟ ಮಾಡಬೇಕು ಎಂಬ ನಿಯಮಗಳನ್ನು ತಿದ್ದುಪಡಿಗೆ ಒಳಪಡಿಸಿ ಅಲ್ಲೇ ಹರಾಜು ಹಾಕಲು ಎಂಐಎಸ್‌ಎಲ್ ಗೆ ಅವಕಾಶ ಮಾಡಿಕೊಡಬೇಕು ಎಂದು ಸಲಹೆಯನ್ನು ನೀಡಿದ್ದಾರೆ.