ಎನ್.ಆರ್.ಪುರ: ಎನ್.ಆರ್.ಎಲ್.ಎಂ. ಸಂಜೀವಿನಿ ಕಾರ್ಯಕ್ರಮದಲ್ಲಿ ಮಹಿಳೆಯರು ಸ್ವಸಹಾಯ ಸಂಘದ ಮೂಲಕ ಜೀವನೋಪಾಯ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದು ಕಾರ್ಯಕ್ರಮದ ಜಿಲ್ಲಾ ವ್ಯವಸ್ಥಾಪಕ ರಾಜೇಂದ್ರಕುಮಾರ್ ಹೇಳಿದರು.
ಬುಧವಾರ ನಾಗಲಾಪುರ ಗ್ರಾಪಂನಲ್ಲಿ ನಾಗಲಾಪುರ ಸಂಜೀವಿನಿ ಗ್ರಾಪಂ ಮಟ್ಟದ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದ ವಾರ್ಷಿಕೋತ್ಸವದ ಸಮಾರೋಪದಲ್ಲಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ 220 ಎನ್.ಆರ್.ಎಂ.ಎಲ್.ಸಂಜೀವಿನಿ ಸ್ವಸಹಾಯ ಸಂಘಗಳಿವೆ. ಇದುವರೆಗೆ ಎನ್.ಆರ್.ಪುರ ತಾಲೂಕಿನಲ್ಲಿ ಮಾತ್ರ ಎರಡು ಒಕ್ಕೂಟಗಳ ವಾರ್ಷಿಕೋತ್ಸವ ನಡೆದಿದೆ. 3 ವರ್ಷದ ಹಿಂದೆ ಸಂಜೀವಿನಿ ಸ್ವಸಹಾಯ ಸಂಘಗಳು ಪ್ರಾರಂಭವಾಗಿವೆ. ಇದುವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 150ಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಿದ್ದೇವೆ. ಪ್ರಾರಂಭದಲ್ಲಿ ಉಳಿತಾಯಕ್ಕೆ ಸೀಮಿತವಾಗಿದ್ದ ಸ್ವಸಹಾಯ ಒಕ್ಕೂಟಗಳು ಈಗ ಜೀವನ ನಡೆಸಲು ಅನುಕೂಲವಾಗುವಂತೆ ಉದ್ಯಮ ಸ್ಥಾಪಿಸಿ ಆರ್ಥಿಕ ಚಟುವಟಿಕೆಗಳಲ್ಲೂ ಭಾಗಿಯಾಗಿದ್ದಾರೆ ಎಂದರು.
ತಾಪಂ ಗ್ರಾಮೀಣ ಉದ್ಯೋಗಖಾತ್ರಿ ಸಹಾಯಕ ನಿರ್ದೇಶಕ ಎನ್.ಎಲ್. ಮನೀಶ್ ಮಾತನಾಡಿ, ಬಹಳ ವರ್ಷಗಳ ಹಿಂದೆ ಮಹಿಳೆಯರು ಮನೆಯಲ್ಲಿ ಹಣ ಉಳಿತಾಯ ಮಾಡುತ್ತಿದ್ದರು. ಇದೇ ಕಲ್ಪನೆಯಲ್ಲಿ ಸ್ವಸಹಾಯ ಸಂಘದ ಮೂಲಕ ಮಹಿಳೆಯರು ಉಳಿತಾಯ ಮಾಡುತ್ತಿದ್ದಾರೆ. ಇಂಥ ಸ್ವಸಹಾಯ ಸಂಘಗಳ ಮೂಲಕ ಮುಖ್ಯವಾಹಿನಿಗೆ ಬರಲು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಕಲಾವಿದ ಅಭಿನವ ಗಿರಿರಾಜ್, ಸಾಹಿತಿ ಜಯಮ್ಮ, ಪಿಡಿಒ ಪ್ರೇಮಕುಮಾರ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಆಟಗಳ ಸ್ಪರ್ಧೆ ಹಾಗೂ ಗೀತ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ನಾಗಲಾಪುರ ಸಂಜೀವಿನಿ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಕಮಲಾ ಸುಧೀರ್, ಗ್ರಾಪಂ ಅಧ್ಯಕ್ಷೆ ರೀನಾ ಬೆನ್ನಿ, ಸಾಹಿತಿ ಜಯಮ್ಮ, ಗ್ರಾಪಂ ಸದಸ್ಯರಾದ ಸುಮಿತ್ರಾ, ಶೋಭಾ, ಕಲಾವಿದ ಅಭಿನವ ಗಿರಿರಾಜ್, ಪಿಡಿಒ ಪ್ರೇಮಕುಮಾರ್, ಚೈತ್ರಾ ಇದ್ದರು.