cancer survivor day | ಆತ್ಮವಿಶ್ವಾಸವೇ ಕ್ಯಾನ್ಸರ್‌ಗೆ ಮದ್ದು: ಕಾಯಿಲೆ ಗೆದ್ದವರ ಮಾತುಗಳು 
ನ್ಯೂಸ್

ಆತ್ಮವಿಶ್ವಾಸವೇ ಕ್ಯಾನ್ಸರ್‌ಗೆ ಮದ್ದು: ಕಾಯಿಲೆ ಗೆದ್ದವರ ಮಾತುಗಳು

ಪಂಕಜ ಕೆ.ಎಂ. ಬೆಂಗಳೂರು
ಕ್ಯಾನ್ಸರ್ ಬರಬಾರದು. ಒಂದು ವೇಳೆ ಬಂದರೆ ಧೃತಿಗೆಡಬಾರದು. ಅದನ್ನು ದೈಹಿಕ ಶಕ್ತಿಯಿಂದ ಮಾತ್ರವಲ್ಲ, ಮಾನಸಿಕ ಧೈರ್ಯದಿಂದ ಎದುರಿಸಬೇಕು. ಕ್ಯಾನ್ಸರ್ ರೋಗವನ್ನು ಗೆದ್ದೇ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸ ಇದ್ದರೆ ಅರ್ಧದಷ್ಟು ಗೆದ್ದಂತೆಯೇ..." ಇವು ಕ್ಯಾನ್ಸರ್ ಕಾಯಿಲೆಯಿಂದ ಗುಣಮುಖರಾಗಿ ಈಗ ಸಾಮಾನ್ಯರಂತೆ ಜೀವನ ನಡೆಸುತ್ತಿರುವವರ ಪ್ರೇರಣಾತ್ಮಕ ಮಾತುಗಳು. ಪ್ರತಿ ವರ್ಷ ಜೂನ್ ತಿಂಗಳ ಮೊದಲ ಭಾನುವಾರ ಆಚರಿಸಲಾಗುವ 'ಕ್ಯಾನ್ಸರ್ ಸರ್ವೈವರ್ಸ್ ಡೇ' ಅಂಗವಾಗಿ, ಆ ರೋಗವನ್ನು ಎದುರಿಸಿ ಗೆದ್ದ ಕೆಲವರ ಅನುಭವ ಕಥನ ಇಲ್ಲಿದೆ.

3 ಸಲ ಕ್ಯಾನ್ಸರ್ ಬಂದ್ರೂ ಈಗ ಆರಾಮಾಗಿದ್ದೇನೆ...!

ನಮ್ಮದು ಅವಿಭಕ್ತ ಕೃಷಿ ಕುಟುಂಬ. ತಂದೆ, ತಾಯಿ, ಸಹೋದರ, ಮಡದಿ, ಮಕ್ಕಳೊಂದಿಗೆ ಹೊಲ, ತೋಟ, ಮನೆ ಎಂದು ನೆಮ್ಮದಿಯ ಜೀವನ ನಡೆಸುತ್ತಿದ್ದೆ. ಊರಿನಲ್ಲಿ ಸಣ್ಣದೊಂದು ಅಂಗಡಿಯನ್ನೂ ಇಟ್ಟುಕೊಂಡಿದ್ದೆ. ಊರ ಹಬ್ಬ, ಗ್ರಾಮದ ಆಚರಣೆಗಳಲ್ಲಿ ಸದಾ ಮುಂದಿರುತ್ತಿದ್ದೆ. ಹಾಗಾಗಿ ನಮ್ಮ ಮನೆಗೆ ಬರುವವರು, ಹೋಗುವವರ ಸಂಖ್ಯೆ ಹೆಚ್ಚು. ಅತಿಥಿ ಸತ್ಕಾರಕ್ಕೇನೂ ಕಡಿಮೆ ಇರಲಿಲ್ಲ. ಇಂತಹ ನಮ್ಮ ಕುಟುಂಬದಲ್ಲಿ 2016ರಲ್ಲಿ ಕ್ಯಾನ್ಸರ್ ಎಂಬ ಬಿರುಗಾಳಿ ಬೀಸಿ ಆತಂಕ ಸೃಷ್ಟಿಸಿತು. ನನಗೆ 42 ವರ್ಷ ವಯಸ್ಸಾಗಿದ್ದಾಗ ಕರುಳಿನ ಕ್ಯಾನ್ಸರ್ ಪತ್ತೆಯಾಯಿತು. ಅದೂ 3ನೇ ಹಂತದಲ್ಲಿ! ವಿಷಯ ತಿಳಿದು ಇಡೀ ಕುಟುಂಬದ ಜಂಘಾಬಲವೇ ಉಡುಗಿ ಹೋಯಿತು. ಮೊದಲೇ ಹಳ್ಳಿ ವಾತಾವರಣ, ಧೈರ್ಯ ಹೇಳುವವರಿಗಿಂತ, ಇನ್ನು ಉಳಿಯುವುದೇ ಕಷ್ಟ ಅಂತ ಹೆದರಿಸುವವರೇ ಜಾಸ್ತಿ ಇದ್ದರು.
ನಾವು ಧೈರ್ಯ ತಂದುಕೊಂಡು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದೆವು. ಅಲ್ಲಿ ವೈದ್ಯರೊಬ್ಬರು 'ಚಿಕಿತ್ಸೆಗೆ ಲಕ್ಷಾಂತರ ರೂ. ಖರ್ಚಾಗುತ್ತದೆ. ಸರ್ಕಾರಿ ಆಸ್ಪತ್ರೆಗೆ ಹೋಗಿ' ಎಂದು ಸಲಹೆ ನೀಡಿದರು. ಅಲ್ಲಿಂದ ಹೋಗಿ ಕಿದ್ವಾಯಿ ಆಸ್ಪತ್ರೆಯಲ್ಲಿ ಕೆಲ ಕಾಲ ಚಿಕಿತ್ಸೆ ಪಡೆದೆ. ನಂತರ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ವಿಮೆ ನೆರವೇನಿಂದ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಾದೆ. ಅಲ್ಲಿ ಚಿಕಿತ್ಸೆ ನೀಡಿದವರು ಡಾ. ಅರವಿಂದ್ ಕಪಾಲಿ. ಮೊದಲಿಗೆ 12 ಕಿಮೋಥೆರಪಿ, 32 ರೇಡಿಯೇಷನ್. ನಂತರ ಶಸ್ತ್ರಚಿಕಿತ್ಸೆ ಆಯಿತು. ಚಿಕಿತ್ಸೆಯಿಂದ ದೈಹಿಕವಾಗಿ ಬಳಲಿದ್ದರೂ, ಈ ನೋವನ್ನೆಲ್ಲ ಸಹಿಸಿಕೊಂಡೆ. ಮಾನಸಿಕವಾಗಿ ಗಟ್ಟಿಯಾಗಿದ್ದೆ. ವೈದ್ಯರ ಸಲಹೆಗಳನ್ನೆಲ್ಲ ಪಾಲಿಸಿದೆ.
ಆದಾಗ್ಯೂ 2021ರಲ್ಲಿ ಮತ್ತೆ ಕ್ಯಾನ್ಸರ್ ಪತ್ತೆಯಾಯಿತು. ಈ ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದೆ. ಆಗ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ನೆರವಿಗೆ ಬಂತು. ಈಗ ನಾಲೈದು ವರ್ಷ ಕಳೆದಿದೆ. ನಿಯಮಿತ ವೈದ್ಯಕೀಯ ತಪಾಸಣೆ, ವೈದ್ಯರ ಸಲಹೆ ಪಡೆಯುತ್ತಿದ್ದೇನೆ. ಕ್ಯಾನ್ಸರ್ ಬಗ್ಗೆ ಯೋಚಿಸುವ ಬದಲು, ಮನೆಯವರೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಅಂಗಡಿಯಲ್ಲೂ ಕೆಲ ಸಮಯ ಕಳೆಯುತ್ತೇನೆ. ನಿಯಮಿತವಾಗಿ ಪ್ರತಿ 6 ತಿಂಗಳಿಗೊಮ್ಮೆ ವೈದ್ಯಕೀಯ ಪರೀಕ್ಷೆ ಮಾಡಿಸುತ್ತೇನೆ. ಶುಗರ್ ಮಾತ್ರೆ ಹೊರತಾಗಿ ಬೇರೆ ಯಾವುದೇ ಔಷಧ ಸೇವಿಸುತ್ತಿಲ್ಲ. ಈಗ ನನಗೆ 52 ವರ್ಷ. ಎಲ್ಲ ಬಗೆಯ ಆಹಾರವನ್ನು ಸೇವಿಸುತ್ತೇನೆ. ನಿತ್ಯ ತೋಟದಲ್ಲಿ ಹಸಿರು ವಾತಾವರಣದಲ್ಲಿ ದನ ಕರುಗಳ ನಡುವೆ ಕಾಲ ಕಳೆಯುತ್ತೇನೆ. ನಿರಂತರ ವೈದ್ಯಕೀಯ ಸಲಹೆ ನೀಡುತ್ತಿರುವ ಡಾ. ಅರವಿಂದ್ ಕಪಾಲಿ ಹಾಗೂ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿ ನಗುಮೊಗದಿಂದಲೇ ಧೈರ್ಯ ಹೇಳುವ ಕಿದ್ವಾಯಿ ಆಸ್ಪತ್ರೆಯ ಡಾ. ಮಹಾಂತೇಶ್ ನನ್ನ ಪಾಲಿನ ದೇವರು.
ವೀರಭದ್ರಯ್ಯ ಯಾಚಘಟ್ಟ, ಕುಣಿಗಲ್ ತಾಲೂಕು
"

"ಕ್ಯಾನ್ಸ‌ರ್ ಆರಂಭದಲ್ಲೇ ಪತ್ತೆಯಾದರೆ ಗುಣಪಡಿಸಲು ಸಾಧ್ಯ ಎಂಬುದು ಸಾಮಾನ್ಯ ನಂಬಿಕೆ. ಆದರೆ ಮೂರನೇ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾಗಿ ಮೂರು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ವೀರಭದ್ರಯ್ಯ ಅವರು ಚೇತರಿಸಿಕೊಂಡು, ಚಟುವಟಿಕೆಯಿಂದ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಅವರಲ್ಲಿರುವ ಆತ್ಮವಿಶ್ವಾಸವೇ ಕಾರಣ. ಅದರ ಜತೆಗೆ, ನಿಯಮಿತ ವೈದ್ಯಕೀಯ ತಪಾಸಣೆಯಿಂದಲೂ ಅವರು ಕ್ಯಾನ್ಸರ್ ಗೆಲ್ಲಲು ಸಾಧ್ಯವಾಗಿದೆ.

ಡಾ. ಅರವಿಂದ ಕಪಾಲಿ, ಕ್ಯಾನ್ಸ‌ರ್ ತಜ್ಞ


ಎಲ್ಲೆಲ್ಲಿ ಆಚರಿಸಲಾಗುತ್ತದೆ..?
ರಾಷ್ಟ್ರೀಯ ಕ್ಯಾನ್ಸರ್ ಸರ್ವೈವರ್ಸ್ ಡೇ ಮೊದಲಿಗೆ ಅಮೆರಿಕದಲ್ಲಿ ಪ್ರಾರಂಭವಾಯಿತು. ಈಗ ಐದು ಖಂಡಗಳಲ್ಲಿ ಆಚರಿಸಲಾಗುತ್ತದೆ. ಭಾರತ, ಕೀನ್ಯಾ, ಬಹಾಮಾಸ್, ಕೆನಡಾ, ಮಲಾವಿ, ಮಾಲ್ಟಾ, ನೈಜೀರಿಯಾ, ರುವಾಂಡಾ, ದಕ್ಷಿಣ ಆಫ್ರಿಕಾ, ಥೈಲ್ಯಾಂಡ್, ಯು.ಎಸ್.ಎ, ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳಲ್ಲಿ ಈ ದಿನವನ್ನು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಆಚರಿಸುತ್ತಾರೆ.

ಭರವಸೆ, ಧೈರ್ಯ ತುಂಬುವ ಸದುದ್ದೇಶ

ಕ್ಯಾನ್ಸ‌ರ್ ರೋಗವನ್ನು ಧೈರ್ಯದಿಂದ ಎದುರಿಸಿ, ಅದರಿಂದ ಯಶಸ್ವಿಯಾಗಿ ಹೊರಬಂದವರನ್ನು ಗೌರವಿಸಲು ಮತ್ತು ಅವರ ಜೀವನದ ಬಗ್ಗೆ ಇತರರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ ತಿಂಗಳ ಮೊದಲ ಭಾನುವಾರವನ್ನು ರಾಷ್ಟ್ರೀಯ ಕ್ಯಾನ್ಸರ್ ಸರ್ವೈವರ್ಸ್ ಡೇ ಎಂದು ಆಚರಿಸಲಾಗುತ್ತದೆ. ಕ್ಯಾನ್ಸರ್ ಕಾಯಿಲೆಯೊಂದಿಗೆ ಹೋರಾಡುತ್ತಿರುವವರಿಗೆ ಮತ್ತು ಆ ಕಾಯಿಲೆಯಿಂದ ಗುಣಮುಖರಾದವರಿಗೆ ಭರವಸೆ ಹಾಗೂ ಧೈರ್ಯ ತುಂಬುವ ಸದುದ್ದೇಶ ಇದರ ಹಿಂದಿದೆ. ಕ್ಯಾನ್ಸರ್‌ನಿಂದ ಬದುಕುಳಿದ ನಂತರವೂ ಕೆಲವರು ಎದುರಿಸುತ್ತಿರುವ ನಿರಂತರ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅವರಿಗೆ ವೈದ್ಯಕೀಯ ಹಾಗೂ ಮಾನಸಿಕ ಬೆಂಬಲ ನೀಡುವ ಅಗತ್ಯವಿದೆ. ಕೇವಲ ಕ್ಯಾನ್ಸರ್‌ನಿಂದ ಬದುಕುಳಿಯುವುದಲ್ಲದೆ, ಕ್ಯಾನ್ಸರ್ ನಂತರದ ಜೀವನವನ್ನು ಆರೋಗ್ಯಕರವಾಗಿ ಮತ್ತು ಸಂತೋಷದಿಂದ ಹೇಗೆ ಮುನ್ನಡೆಸಬಹುದು ಎಂಬುದನ್ನು ತಿಳಿಸುವುದು ಈ ದಿನದ ವಿಶೇಷ. ಜನರಲ್ಲಿ ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ.

ಆರಂಭದಲ್ಲೇ ಪತ್ತೆಯಾಗಿದ್ರಿಂದ ಬದುಕಿದೆ...

ಗೃಹಿಣಿಯಾಗಿದ್ದ ನನಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಾಗ ವಯಸ್ಸು 39. ಒಂದು ದಿನ ಸ್ನಾನ ಮಾಡುತ್ತಿದ್ದಾಗ, ಸ್ತನದಲ್ಲಿ ಸಣ್ಣದಾಗಿ ಒಂದು ಗಂಟು ಇರುವುದು ಕಾಣಿಸಿತು. ಆದರೆ ನೋವು ಇರಲಿಲ್ಲ. ಬಹಳಷ್ಟು ಮಂದಿ ಸ್ತನ ಕ್ಯಾನ್ಸರ್ ಬಗ್ಗೆ ಮಾತನಾಡುತ್ತಿದ್ದದ್ದು, ಅದರಿಂದ ನೋವು ಅನುಭವಿಸಿದ್ದರ ಬಗ್ಗೆ ತಿಳಿದಿತ್ತು. ಹಾಗಾಗಿ ಅನುಮಾನಗೊಂಡು ಮಂಡ್ಯದ ಸರ್ಕಾರಿ ಆಸ್ಪತ್ರೆಗೆ ಹೋದೆ. ಅಲ್ಲಿ ಪರೀಕ್ಷೆ ಮಾಡಿಸಿದಾಗ ಸ್ತನ ಕ್ಯಾನ್ಸ‌ರ್ ಇರುವುದು ಖಾತ್ರಿಯಾಯಿತು. ಕಿದ್ವಾಯಿ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದರು. ಕಿದ್ವಾಯಿಯಲ್ಲಿ ತಪಾಸಣೆ ನಡೆಸಿದ ವೈದ್ಯರು ಇನ್ನೂ ಆರಂಭಿಕ ಹಂತದಲ್ಲೇ ಇರುವುದರಿಂದ ಕೂಡಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸೂಚಿಸಿದರು.
ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಪತಿ ಮತ್ತು ಮಗ ನೀಡಿದ ಧೈರ್ಯದಿಂದ ಶಸ್ತ್ರಚಿಕಿತ್ಸೆ ಏನೋ ಆಯಿತು. ಅದರಿಂದ ಅಂತಹ ನೋವೇನೂ ಕಾಣಿಸಲಿಲ್ಲ. ಆದರೆ 6 ಕಿಮೋಥೆರಪಿ, 23 ರೇಡಿಯೋಥೆರಪಿ ಪಡೆಯಬೇಕಾಯಿತು. ಅದಂತೂ ದೊಡ್ಡ ಸವಾಲಾಗಿತ್ತು. ದೇಹದಲ್ಲಿನ ಶಕ್ತಿಯೇ ಉಡುಗಿ ಹೋಗಿತ್ತು. ನಿಲ್ಲಲೂ ಆಗದಷ್ಟು ನಿತ್ರಾಣ. ಆದರೆ ಧೈರ್ಯಗೆಡಲಿಲ್ಲ. ಆಗ ಕುಟುಂಬವೂ ನನಗೆ ಬಹಳ ಸಹಕಾರ ನೀಡಿತು. ಎಲ್ಲ ಹಂತದ ಚಿಕಿತ್ಸೆ ಪಡೆದು ನಿಧಾನವಾಗಿ ಚೇತರಿಸಿಕೊಂಡೆ. ಈಗ ಯಾವುದೇ ನೋವಿಲ್ಲ. ಆದರೆ ಸುಸ್ತು, ಬಳಲಿಕೆ ಇದೆ. ವೈದ್ಯರ ಸಲಹೆಯಂತೆ ಔಷಧ ಸೇವಿಸುತ್ತಿದ್ದೇನೆ. ಮೂರು ವರ್ಷ ಆಯ್ತು ಆರೋಗ್ಯವಾಗಿದ್ದೇನೆ. ಕ್ಯಾನ್ಸರ್ ಬಗ್ಗೆ ಅರಿವು ಬಹಳ ಮುಖ್ಯ. ಈ ಬಗ್ಗೆ ನಾನು ಇತರರು ಮಾತನಾಡುವುದನ್ನು ಕೇಳಿ ತಿಳಿದಿದ್ದೆ. ಹಾಗಾಗಿ ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯಲು ಸಾಧ್ಯವಾಯಿತು. ಆದರೆ ಬಹಳಷ್ಟು ಮಂದಿ ಇದರ ಅರಿವಿಲ್ಲದೆ ನಿರ್ಲಕ್ಷಿಸಿಬಿಡುತ್ತಾರೆ. ಗಂಭೀರ ಹಂತದಲ್ಲಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗುತ್ತಾರೆ, ಆಗ ಅದು ಪ್ರಯೋಜನ ಆಗುವುದಿಲ್ಲ. ಹಾಗಾಗಿ ಜನರಲ್ಲಿ ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ.
ಭಾಗ್ಯಮ್ಮ, ಮಂಡ್ಯ

5 ವರ್ಷ ಮೊದಲೇ ಕ್ಯಾನ್ಸ‌ರ್ ಪತ್ತೆ!

ಶ್ವಾಸಕೋಶದ ಕ್ಯಾನ್ಸ‌ರ್ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಐದು ವರ್ಷಗಳಿಗಿಂತಲೂ ಮುಂಚಿತವಾಗಿ ಅದನ್ನು ಪತ್ತೆ ಹಚ್ಚಬಲ್ಲ ಪ್ರಮುಖ ರಕ್ತ ಪರೀಕ್ಷೆಯೊಂದನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಭಾರತದಂತಹ ದೇಶಗಳಲ್ಲಿ ಶ್ವಾಸಕೋಶದ ಕ್ಯಾನ್ಸ‌ರ್ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಈ ಸಂಶೋಧನೆ ಅತ್ಯಂತ ಮಹತ್ವದ್ದಾಗಿದೆ ಎಂದು ದೆಹಲಿಯ ವಿಜ್ಞಾನಿಗಳು ಮತ್ತು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ ಅಂಶಗಳು

'ಸೆಲ್' ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವಿಜ್ಞಾನಿಗಳು ರಕ್ತದಲ್ಲಿರುವ 14 ಪ್ರೊಟೀನ್‌ಗಳ ವಿಶಿಷ್ಟ ಸಂಯೋಜನೆಯನ್ನು (ಪ್ರೊಟೀನ್ ಬ್ಲಡ್ ಸಿಗ್ನೇಚರ್) ಗುರುತಿಸಿದ್ದಾರೆ. ಇದು ಶ್ವಾಸಕೋಶದ ಕ್ಯಾನ್ಸ‌ರ್ ಬರುವ ಸಾಧ್ಯತೆಯ ಬಗ್ಗೆ ಸರಾಸರಿ 5 ವರ್ಷ 6 ತಿಂಗಳಿಗಿಂತ ಮುಂಚಿತವಾಗಿಯೇ ಮುನ್ಸೂಚನೆ ನೀಡಬಲ್ಲದು. ಯುಕೆ ಬಯೋಬ್ಯಾಂಕ್‌ನ 48,000ಕ್ಕೂ ಹೆಚ್ಚು ಜನರ ರಕ್ತದ ಮಾದರಿಗಳು ಮತ್ತುสุขภาพ ಡೇಟಾಗಳನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ. ಈ 14 ಪ್ರೊಟೀನ್‌ಗಳ ಸಂಯೋಜನೆಯು ವಯಸ್ಸು, ಧೂಮಪಾನದ ಇತಿಹಾಸ ಮತ್ತು ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳಿಗಿಂತಲೂ ನಿಖರವಾಗಿ ಕ್ಯಾನ್ಸರ್ ಅಪಾಯದ ಬಗ್ಗೆ ಮುನ್ಸೂಚನೆ ನೀಡುತ್ತದೆ ಎಂದು ತಿಳಿದುಬಂದಿದೆ.

ಭಾರತಕ್ಕೆ ಏಕೆ ಇದು ಮುಖ್ಯ?

ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸ‌ರ್ ಪ್ರಕರಣಗಳು 2015ರಲ್ಲಿ ಸುಮಾರು 63,700 ಇದ್ದವು, 2025ರ ವೇಳೆಗೆ 81,000ಕ್ಕಿಂತ ಹೆಚ್ಚಾಗಿವೆ. ಪ್ರಸ್ತುತ ಶೇ. 80ರಿಂದ 85ರಷ್ಟು ರೋಗಿಗಳಲ್ಲಿ ಕ್ಯಾನ್ಸರ್ ಕೊನೆಯ ಹಂತ ತಲುಪಿದಾಗ ಮಾತ್ರ ಪತ್ತೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಆರಂಭಿಕ ರಕ್ತ ಪರೀಕ್ಷೆಯಿಂದಾಗಿ ರೋಗಿಗಳಿಗೆ ಮುಂಚಿತವಾಗಿಯೇ ಚಿಕಿತ್ಸೆ ನೀಡಲು ಮತ್ತು ಜೀವ ಉಳಿಸಲು ಸಹಕಾರಿಯಾಗಲಿದೆ.
ದೆಹಲಿಯ ಎಮ್ಸ್ ಸಂಸ್ಥೆಯ ರೇಡಿಯೇಷನ್ ಆಂಕಾಲಾಜಿಸ್ಟ್ ಡಾ. ಅಭಿಷೇಕ್ ಶಂಕರ್ ಅವರ ಪ್ರಕಾರ, ಈ ರಕ್ತ ಪರೀಕ್ಷೆಯನ್ನು ನೇರವಾಗಿ ಕ್ಯಾನ್ಸರ್ ಪತ್ತೆ ಹಚ್ಚುವ ಪರೀಕ್ಷೆ ಎನ್ನುವುದಕ್ಕಿಂತ, 'ಅಪಾಯದ ಮೌಲ್ಯಮಾಪನ ಸಾಧನ' (ರಿಸ್ಕ್ ಅಸೆಸ್‌ಮೆಂಟ್ ಟೂಲ್) ಎಂದು ಪರಿಗಣಿಸುವುದು ಒಳ್ಳೆಯದು. ಅಂದರೆ, ಈ ಪರೀಕ್ಷೆ ನೇರವಾಗಿ ಕ್ಯಾನ್ಸರಿನ ಟ್ಯೂಮರನ್ನು ಪತ್ತೆ ಹಚ್ಚುವುದಿಲ್ಲ, ಬದಲಿಗೆ ಭವಿಷ್ಯದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಬರುವ ಹೆಚ್ಚಿನ ಅಪಾಯವಿರುವ ವ್ಯಕ್ತಿಗಳನ್ನು ಗುರುತಿಸುತ್ತದೆ. ಇಂತಹ ವ್ಯಕ್ತಿಗಳು ನಂತರ ಲೋ-ಡೋಸ್ ಸಿಟಿ ಸ್ಕ್ಯಾನ್‌ಗಳ ಮೂಲಕ ಹೆಚ್ಚಿನ ತಪಾಸಣೆಗೆ ಒಳಗಾಗಬಹುದು.

ವಾಯುಮಾಲಿನ್ಯದ ಪ್ರಭಾವ

ಈ ಪ್ರೊಟೀನ್ ಸಿಗ್ನೇಚರ್ ಧೂಮಪಾನಿಗಳಲ್ಲಿ ಮಾತ್ರವಲ್ಲದೆ, ಕಣರೂಪದ ವಾಯು ಮಾಲಿನ್ಯಕ್ಕೆ (ಪಾರ್ಟಿಕ್ಯುಲೇಟ್ ಏರ್ ಪೊಲ್ಯೂಷನ್) ಒಡ್ಡಿಕೊಳ್ಳುವವರಲ್ಲಿಯೂ ಹೆಚ್ಚಾಗಿ ಕಂಡುಬಂದಿದೆ. ಇದು ಭಾರತದಂತಹ ವಾಯುಮಾಲಿನ್ಯದ ಸಮಸ್ಯೆ ಹೆಚ್ಚಿರುವ ದೇಶಗಳಿಗೆ ಅತ್ಯಂತ ಪ್ರಸ್ತುತ ವಿಷಯ.

ಪ್ರತಿಬಂಧಕ ಚಿಕಿತ್ಸೆಯ ಸಾಧ್ಯತೆ

ಇಂಟರ್ಲ್ಯೂಕಿನ್-1 ಬೀಟಾ ಎಂಬ ಉರಿಯೂತ ನಿವಾರಕ ಔಷಧವು ಹೆಚ್ಚಿನ ಪ್ರೊಟೀನ್ ಮಟ್ಟವನ್ನು ಹೊಂದಿರುವ ಜನರಲ್ಲಿ ಕ್ಯಾನ್ಸ‌ರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬ ಆರಂಭಿಕ ಪುರಾವೆಗಳು ಸಿಕ್ಕಿವೆ. ಇದು ರೋಗ ಬರುವ ಮುನ್ನವೇ ತಡೆಗಟ್ಟುವ ಚಿಕಿತ್ಸೆಗೆ ದಾರಿ ಮಾಡಿಕೊಡುತ್ತದೆ.

ಪ್ರಾಯೋಗಿಕ ಪರೀಕ್ಷೆ

ಈ ರಕ್ತಪರೀಕ್ಷೆಯನ್ನು ವೈದ್ಯಕೀಯ ಬಳಕೆಗೆ ತರುವ ಮುನ್ನ ಭಾರತೀಯರ ಮೇಲೆಯೂ ಇದರ ಪ್ರಾಯೋಗಿಕ ಪರೀಕ್ಷೆಗಳು ಮತ್ತು ಮೌಲೀಕರಣ ನಡೆಯಬೇಕಾಗಿದೆ. ಈ ಸಂಶೋಧನೆಯು ಸಾಂಪ್ರದಾಯಿಕ ಅಪಾಯಕಾರಿ ಅಂಶಗಳನ್ನು ಮೀರಿ, ಕ್ಯಾನ್ಸರ್ ಬರುವ ವರ್ಷಗಳ ಮುಂಚಿತವಾಗಿಯೇ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲು ವೈದ್ಯಕೀಯ ಕ್ಷೇತ್ರಕ್ಕೆ ಹೊಸ ಭರವಸೆಯನ್ನು ನೀಡಿದೆ.