ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಮೆಚ್ಚಿನ ಪುಸ್ತಕ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಡಾ. ಎಸ್.ಎಂ.ಮುತ್ತಯ್ಯ ಮಾತನಾಡಿದರು. ಡಾ. ಪ್ರಕಾಶ್ ಮರ‌್ಗನಳ್ಳಿ, ಪ್ರೊ. ಟಿ.ಅವಿನಾಶ್, ಡಾ. ಜಿ.ಎನ್.ಧನಂಜಯ ಮೂರ್ತಿ ಇದ್ದರು. 
ನ್ಯೂಸ್

ಪುಸ್ತಕ ಅಧ್ಯಯನದಿಂದ ಆತ್ಮವಿಶ್ವಾಸ ವೃದ್ಧಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಓದು ಜ್ಞಾನದ ಅರಿವನ್ನು ವಿಸ್ತರಿಸುತ್ತದೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ ಎಂದು ಕುವೆಂಪು ವಿವಿ ಕನ್ನಡ ಅಧ್ಯಾಪಕರ ವೇದಿಕೆ ಕಾರ್ಯದರ್ಶಿ ಡಾ. ಎಸ್.ಎಂ.ಮುತ್ತಯ್ಯ ಹೇಳಿದರು.

ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಕನ್ನಡ ವಿಭಾಗ, ಕುವೆಂಪು ವಿವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಮೆಚ್ಚಿನ ಪುಸ್ತಕ ವಿಚಾರ ಸಂಕಿರಣ ಹಾಗೂ ಪ್ರಬಂಧ ಮಂಡನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ಓದುವ ಮೂಲಕ ಮಾನವೀಯ ಗುಣ ಬೆಳೆಸಿಕೊಳ್ಳಬೇಕು. ಆಯ್ಕೆ ಮಾಡಿ ಪುಸ್ತಕಗಳನ್ನು ಓದಬೇಕು. ಸಾಹಿತ್ಯ ಓದುವುದರಿಂದ ಮಾನವೀಯ ಗುಣ ಬೆಳೆಯುತ್ತದೆ ಎಂದರು.

ಅಂಬೇಡ್ಕರ್, ಗಾಂಧಿ ಮುಂತಾದವರು ಅದ್ಭುತ ಓದುಗರು. ಅವರು ಓದಿದ್ದರಿಂದಲೇ ನಾಡಿಗೆ ಬೆಳಕು ನೀಡಿದ್ದಾರೆ. ಅಂಬೇಡ್ಕರ್ ತನ್ನ ಓದಿನ ಮೂಲಕ ಅವಮಾನಗಳನ್ನು ದೂರ ಮಾಡಿದ್ದಾರೆ. ಸಂವಿಧಾನವೇ ಇದಕ್ಕೆ ಉದಾಹರಣೆ. ಸಮಾಜದ ನೋವಿಗೆ, ಭಾಷಾ ಕೌಶಲಕ್ಕೆ, ಬದುಕನ್ನು ಕಟ್ಟಿಕೊಳ್ಳಲು, ಸ್ವಾರ್ಥದಿಂದ ದೂರವಿರಲು ಜ್ಞಾನ ಬೇಕು ಎಂದರು.

ಪ್ರಾಚಾರ್ಯ ಪ್ರೊ.ಟಿ.ಅವಿನಾಶ್ ಮಾತನಾಡಿ, ಓದು ನಮ್ಮನ್ನು ಮರು ವಿಮರ್ಶೆಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ್ ಮರ‌್ಗನಳ್ಳಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಮತ್ತು ಪುಸ್ತಕಗಳ ಅಭಿಪ್ರಾಯಗಳನ್ನು ಸ್ವತಃ ವಿಮರ್ಶೆ ಮಾಡಲು ಕಾರ್ಯಕ್ರಮ ಆಯೋಜಿಸಲಾಗಿದೆ. 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಬಂಧ ಮಂಡಿಸುತ್ತಿದ್ದಾರೆ. ಎಲ್ಲರ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ತರುವ ಯೋಚನೆ ಇದೆ ಎಂದು ಹೇಳಿದರು.

ಕೊಪ್ಪ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಜಿ.ಎನ್.ಧನಂಜಯ ಮೂರ್ತಿ, ಉಪನ್ಯಾಸಕರಾದ ಡಾ. ಜಿ.ಆರ್.ಲವ, ಡಾ. ಎಚ್.ದೊಡ್ಡನಾಯ್ಕ, ಡಾ.ರಾಜೀವ್ ನಾಯ್ಕ , ಮಮತಾ ಮುಂತಾದವರಿದ್ದರು.