ನ್ಯೂಸ್

ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಆಯ್ಕೆ ಜಿಲ್ಲಾಧಿಕಾರಿ ಸುಪರ್ದಿಗೆ

ಎನ್.ಎಲ್. ಶಿವಮಾದು

ಬೆಂಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಮತ್ತು ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಪರೀಕ್ಷಾ ಕೇಂದ್ರಗಳ ಆಯ್ಕೆಯಲ್ಲಿ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ.

ವೆಬ್‌ಕಾಸ್ಟಿಂಗ್ ವ್ಯವಸ್ಥೆ ಅಡಿಯಲ್ಲಿ ಪರೀಕ್ಷೆ ನಡೆಸುತ್ತಿರುವುದರಿಂದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಸಲು ಬೇಕಾದ ಮೂಲಸೌಕರ್ಯಗಳಾದ ಸಿಸಿಟಿವಿ, ಸುಸಜ್ಜಿತ ಕೊಠಡಿಗಳು, ಕನಿಷ್ಠ 500 ಮಂದಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಬೇಕಾದ ಕೊಠಡಿಗಳು ಸೇರಿ ಹಲವು ಸೌಲಭ್ಯವಿರುವ ಕೇಂದ್ರಗಳನ್ನು ಆಯ್ಕೆ ಮಾಡಬೇಕಾಗುತ್ತದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಾ.1ರಿಂದ 19ರವರೆಗೆ ದ್ವಿತೀಯ ಪಿಯುಸಿ ಮತ್ತು ಮಾ.20ರಿಂದ ಏ.2ರವರೆಗೆ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-1 ಅನ್ನು ನಡೆಸಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ.

ಅದರಂತೆ ಜನವರಿ ತಿಂಗಳಾಂತ್ಯಕ್ಕೆ ಪರೀಕ್ಷಾ ಕೇಂದ್ರಗಳ ಅಂತಿಮಗೊಳಿಸಲು ನಿರ್ದೆಶನ ನೀಡಲಾಗಿದೆ. ಇಲ್ಲಿಯವರೆಗೂ ಶಿಕ್ಷಣ ಇಲಾಖೆ ಅಧಿಕಾರಿಗಳೇ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡುತ್ತಿದ್ದರು. ಆದರೆ, ಈ ವರ್ಷ ಶಿಕ್ಷಣ ಇಲಾಖೆ ಅಧಿಕಾರಿಗಳು ಆಯ್ಕೆ ಮಾಡಿ ಅಂತಿಮಗೊಳಿಸಿದ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿಗಳು ಮೊಹರು ಹೊತ್ತಬೇಕಿದೆ.

ಸಾಮಾನ್ಯವಾಗಿ ಪರೀಕ್ಷೆ ನಡೆಸುವ ವೇಳೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ಸಹಾಯ ಪಡೆಯಲಾಗುತ್ತದೆ. ಆದರೆ, ಕೇಂದ್ರಗಳ ಆಯ್ಕೆಯಲ್ಲಿ ಜಿಲ್ಲಾಧಿಕಾರಿಗಳ ಹೊಣೆಗಾರಿಕೆ ಇದೇ ಮೊದಲ ಬಾರಿಯಾಗಿದೆ.

ಪಾಠ- ಪ್ರವಚನಗಳ ಮೇಲೆಯೂ ಗಮನ:

ವೆಬ್‌ಕಾಸ್ಟಿಂಗ್ ನಿಯಮ ಜಾರಿಗೊಳಿಸಿದ ಪರಿಣಾಮ 2022-23ಕ್ಕಿಂತ 2023-24ರಲ್ಲಿ ಶೇ.10.49 ಫಲಿತಾಂಶ ಕುಸಿತವಾಗಿತ್ತು. ಕೇವಲ ಶೇ.73.40 ರಷ್ಟು ಫಲಿತಾಂಶ ದಾಖಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಶಾಲಾ ಆಡಳಿತ ಮಂಡಳಿಗಳು ಹಿಂದಿನ ವರ್ಷಗಳಿಗಿಂತ ಹೆಚ್ಚುವರಿ ಪಾಠ-ಪ್ರವಚನಗಳನ್ನು ನಡೆಸುತ್ತಿದ್ದಾರೆ.

ಲಿತಾಂಶ ಹೆಚ್ಚಳ ಮಾಡಲು ವಿಶೇಷ ತರಗತಿಗಳನ್ನು ನಡೆಸುತ್ತಿರುವ ಮೇಲೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಕೂಡ ಮುತುವರ್ಜಿ ವಹಿಸಿದ್ದಾರೆ ಎಂದು ಶಿಕ್ಷಕರೊಬ್ಬರು ಮಾಹಿತಿ ಹಂಚಿಕೊಂಡರು.

ಕೃಪಾಂಕ ರದ್ದು ಬೋಧನೆಗೆ ಆದ್ಯತೆ:

ಮುಂಬರುವ ಪರೀಕ್ಷೆಗಳಲ್ಲಿ ಕೃಪಾಂಕವನ್ನು ರದ್ದುಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಈ ಕಾರಣದಿಂದ ಕೆಲವು ಶಾಲೆಗಳಲ್ಲಿ ಬೋಧನೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ, ಒಂದು ವೇಳೆ ಮಕ್ಕಳು ೇಲಾದರೆ, ಶಾಲೆಯ ಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂಬ ಕಾರಣದಿಂದ ಎಚ್ಚೆತ್ತುಕೊಂಡು ಬೋಧನೆ ಮಾಡಲಾಗುತ್ತಿದೆ ಎನ್ನುತ್ತಾರೆ ಶಿಕ್ಷಕರು.

ಕಠಿಣ ನಿಯಮಗಳಿಗೆ ಪಾಲಕರ ಆಕ್ಷೇಪ

ಪರೀಕ್ಷಾ ಕೇಂದ್ರಗಳ ಆಯ್ಕೆಯನ್ನು ಜಿಲ್ಲಾಧಿಕಾರಿಗಳ ಸುಪರ್ದಿಗೆ ನೀಡಿ ನಿಯಮಗಳನ್ನು ತುಂಬಾ ಕಠಿಣಗೊಳಿಸುತ್ತಿರುವುದಕ್ಕೆ ಪಾಲಕರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಒಂದೆಡೆ ಮಕ್ಕಳನ್ನು 8ನೇ ತರಗತಿಯವರೆಗೂ ಅನುತ್ತೀರ್ಣ ಮಾಡದೆ, ಪಾಸ್ ಮಾಡುತ್ತೀರಿ. ಮತ್ತೊಂದೆಡೆ ಎಸ್ಸೆಸ್ಸೆಲ್ಸಿಯಲ್ಲಿ ಐಎಎಸ್ ಅಧಿಕಾರಿಗಳ ಪ್ರವೇಶ ಪರೀಕ್ಷೆಗೆ ಯುಪಿಎಸ್ಸಿ ನಡೆಸುವ ರೀತಿಯಲ್ಲಿ ವೆಬ್ ಕಾಸ್ಟಿಂಗ್ ಮಾಡಿ ಪರೀಕ್ಷೆ ಮಾಡುತ್ತಿದ್ದೀರಿ. ಕಲಿಕಾ ಗುಣಮಟ್ಟಕ್ಕೆ ಆದ್ಯತೆ ನೀಡದೆ, ಕೇವಲ ಪರೀಕ್ಷೆ ನಿಯಮಗಳನ್ನು ಕಠಿಣಗೊಳಿಸಿದರೆ ಏನು ಪ್ರಯೋಜನ? ಇದರಿಂದ ಅನುತ್ತೀರ್ಣ ಸಂಖ್ಯೆ ಹೆಚ್ಚಳವಾಗಲಿದೆ ಎನ್ನುತ್ತಾರೆ ಪಾಲಕ ರಮೇಶ್.

ವೆಬ್ ಕಾಸ್ಟಿಂಗ್ ಸೇರಿ ಸುಸೂತ್ರವಾಗಿ ಪರೀಕ್ಷೆ ನಡೆಸುವಲ್ಲಿ ಜಿಲ್ಲಾಧಿಕಾರಿಗಳ ಪಾತ್ರ ಇರುವ ಕಾರಣ ಅವರ ಅನುಮತಿಯನ್ನು ಪಡೆಯಲು ಸಹ ತಿಳಿಸಲಾಗಿದೆ. - ಎಚ್. ಬಸವರಾಜೇಂದ್ರ, ಪರೀಕ್ಷಾ ಮಂಡಳಿ ಅಧ್ಯಕ್ಷ