ಗುಬ್ಬಿ ತಾಲೂಕಿನ ಎಂ.ಎನ್​.ಕೋಟೆಯ ಮಳಿಗೆ ಮೇಲೆ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ನೇತೃತ್ವದ ತಂಡ ದಾಳಿ ನಡೆಸಿ ಕೀಟನಾಶಕ ಜಪ್ತಿ ಮಾಡಿತು. ದಾಳಿಯಲ್ಲಿ ಸಹಾಯಕ ಕೃಷಿ ನಿರ್ದೇಶಕ ವೈ.ಅಶ್ವತ್ಥನಾರಾಯಣ, ಕೃಷಿ ಅಧಿಕಾರಿ ಎಂ.ಆರ್​.ಮಹದೇವಯ್ಯ, ನಿಟ್ಟೂರು ರೈತ ಸಂಪರ್ಕ ಕೇಂದ್ರ ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಅಶ್ವಿನಿ ಇದ್ದರು. 
ನ್ಯೂಸ್

ಕೀಟನಾಶಕ ದಾಸ್ತಾನು ಜಪ್ತಿ

ವಿಜಯವಾಣಿ ಸುದ್ದಿಜಾಲ ತುಮಕೂರು

ಗುಬ್ಬಿ ತಾಲೂಕು ನಿಟ್ಟೂರು ಹೋಬಳಿ ಎಂ.ಎನ್​.ಕೋಟೆಯ ವಾಸವಿ ಹಾರ್ಡ್​ವೇರ್ಸ್​ ಮತ್ತು ಎಲೆಕ್ಟ್ರಿಕಲ್ಸ್​ ಮಳಿಗೆಯಲ್ಲಿ ದಾಖಲಾತಿ ನಿರ್ವಹಣೆ ಹಾಗೂ ಪರವಾನಗಿ ಇಲ್ಲದೆ ಅನಧಿಕೃತವಾಗಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದರು ಎನ್ನಲಾದ ಅಂದಾಜು 22,500 ರೂ. ಮೌಲ್ಯದ 127.14 ಕೆಜಿ ಕೀಟನಾಶಕ ಜಪ್ತಿ ಮಾಡಲಾಗಿದೆ.

ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ನೇತೃತ್ವದಲ್ಲಿ ಗುರುವಾರ ದಾಳಿ ನಡೆಸಿದ ಅಧಿಕಾರಿಗಳು, ಅನಧಿಕೃತ ದಾಸ್ತಾನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಕೃಷಿ ಇಲಾಖೆಯ ಅಧಿಕಾರಿಗಳ ತಂಡ ಜು.31ರಂದು ವಾಸವಿ ಹಾರ್ಡ್​ವೇರ್ಸ್​ ಮತ್ತು ಎಲೆಕ್ಟಿಕಲ್ಸ್​ ಮಳಿಗೆ ಪರಿಶೀಲಿಸಲು ಮುಂದಾದಾಗ ಅಸಹಕಾರ ನೀಡಿದ್ದರಿಂದ ಮಳಿಗೆಯನ್ನು ಲಾಕ್​ ಮಾಡಿ ನೋಟಿಸ್​ ಜಾರಿ ಮಾಡಲಾಗಿತ್ತು. ಮರುದಿನ ಮಾಲೀಕರ ಸಮ್ಮುಖದಲ್ಲಿ ಪರಿಶೀಲಿಸಿದಾಗ ಖರೀದಿ ಇನ್​ವಾಯ್ಸ್​, ದಾಸ್ತಾನು ವಹಿ, ನಗದು ಬಿಲ್ಲುಗಳಿಲ್ಲದೆ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಕೀಟನಾಶಕ ಜಪ್ತಿ ಮಾಡಲಾಗಿದೆ.

ಎಂ.ಎನ್​.ಕೋಟೆಯಲ್ಲಿ ಕಳೆದ ಸಾಲಿನಲ್ಲಿಯೂ ಒಂದು ಮಳಿಗೆಯಲ್ಲಿ ಅನಧಿಕೃತ ಕೀಟನಾಶಕ ಮಾರಾಟ ಮಾಡುತ್ತಿದ್ದರಿಂದ ಜಪ್ತಿ ಮಾಡಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಗ್ರಾಮದಲ್ಲಿ ಇದು 2ನೇ ಪ್ರಕರಣವಾಗಿದೆ. ಮಾರಾಟಗಾರರು ಕೀಟನಾಶಕ ಕಾಯ್ದೆ 1968&ನಿಯಮಗಳು 1991ಅನ್ನು ಉಲ್ಲಂಘನೆ ಮಾಡಿರುವುದರಿಂದ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.