ಹೈದರಾಬಾದ್: ಕೇರಳದ ಚಿನ್ನ ಕಳ್ಳಸಾಗಣೆ ಕೇಸ್ನ ತನಿಖೆ ಪ್ರಗತಿಯಲ್ಲಿರುವಾಗಲೇ ಹೈದರಾಬಾದ್ ವಿಮಾನ ನಿಲ್ದಾಣದಲ್ಲೂ ಬರೋಬ್ಬರಿ 6.6 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 21 ಕಿಲೋ ಚಿನ್ನ ಕಸ್ಟಮ್ಸ್ ವಶಕ್ಕೆ ಸೇರಿದೆ. ಕಳ್ಳಸಾಗಣೆ ಮೂಲಕ ಭಾರತಕ್ಕೆ ಸಾಗಿಸುವ ಪ್ರಯತ್ನದಲ್ಲಿದ್ದಾಗ ಇದು ಪತ್ತೆಯಾಗಿದೆ. ಈ ಬೆಳವಣಿಗೆ ಹತ್ತಕ್ಕೂ ಹೆಚ್ಚು ಚಿನ್ನದ ವ್ಯಾಪಾರಿಗಳ ಮೇಲೆ ನಿಗಾ ಇರಿಸುವಂತೆ ಮಾಡಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಏರ್ಪೋರ್ಟ್ನ ಡೊಮೆಸ್ಟಿಕ್ ಏರ್ ಕಾರ್ಗೋ ಕಾಂಪ್ಲೆಕ್ಸ್ನಲ್ಲಿ ಈ ಚಿನ್ನ ಪತ್ತೆಯಾಗಿತ್ತು. ವಶಪಡಿಸಿಕೊಳ್ಳಲಾದ ಚಿನ್ನದಲ್ಲಿ 18 ಕಿಲೋದಷ್ಟು ಚಿನ್ನ ಆಭರಣ ರೂಪದಲ್ಲಿದೆ. 2 ಕಿಲೋ ಚಿನ್ನ ವಿದೇಶಿ ಮುದ್ರೆ ಇರುವ ಬಿಸ್ಕೆಟ್ ರೂಪದಲ್ಲಿದೆ. ಒಂದು ಕಿಲೋದಷ್ಟು ಡೈಮಂಡ್ ಸ್ಟಡ್ ಅಳವಡಿಸಿದ ಜುವೆಲ್ಲರಿ ರೂಪದಲ್ಲಿದೆ. ವಜ್ರಗಳು ಮತ್ತು ರೋಲೆಕ್ಸ್ ರಿಸ್ಟ್ ವಾಚ್ ಕೂಡ ಇದರೊಂದಿಗೆ ಇವೆ.
ಚಿನ್ನಾಭರಣ, ಚಿನ್ನದ ಬಾರ್ಗಳು ವಿದೇಶಿ ಮೂಲದವಾಗಿದ್ದು, ಎಲ್ಲವೂ 999 ಪರಿಶುದ್ಧತೆ ಹೊಂದಿವೆ. ಲೂಸ್ ಡೈಮಂಡ್, ವಿವಿಧ ಅಮೂಲ್ಯ ಹರಳುಗಳು, ವಾಚ್, ಪ್ಲಾಟಿನಂ ಟಾಪ್ಸ್, ಆಂಟಿಕ್ ನಾಣ್ಯಗಳು ಕೂಡ ವಶಪಡಿಸಿರುವ ವಸ್ತುಗಳಲ್ಲಿವೆ. ಇವುಗಳ ಒಟ್ಟು ಮೌಲ್ಯ 6,62,46,387 ರೂಪಾಯಿ ಎಂದು ಅಂದಾಜಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಆರ್ಆರ್ ನಗರ ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಯಾರು ಗೊತ್ತಾ? ಇಲ್ಲಿದೆ ಡಿಕೆಶಿ ಫೈನಲ್ ಲಿಸ್ಟ್
ಕಸ್ಟಮ್ಸ್ ಅಧಿಕಾರಿಗಳ ಜತೆಗೆ ಜಿಎಸ್ಟಿ ಅಧಿಕಾರಿಗಳೂ ತನಿಖೆಯಲ್ಲಿ ಕೈ ಜೋಡಿಸಿದ್ದಾರೆ. ಯಾವುದೇ ಇನ್ವಾಯ್ಸ್ ಇಲ್ಲದೆ ಚಿನ್ನವನ್ನು ಅಂತರ್ರಾಜ್ಯ ಸಾಗಣೆ ಮಾಡುತ್ತಿರುವುದನ್ನು ಪತ್ತೆ ಹಚ್ಚುವ ಕೆಲಸಕ್ಕೆ ಅವರು ಮುಂದಾಗಿದ್ದಾರೆ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೂಡ ತನಿಖೆಗೆ ಕೈ ಜೋಡಿಸಿದ್ದಾರೆ. (ಏಜೆನ್ಸೀಸ್)