ಅರಕಲಗೂಡಿನಲ್ಲಿ ಶಾಸಕ ಎ. ಮಂಜು ಮಂಗಳವಾರ ಕೆಪಿಟಿಸಿಎಲ್ ಮತ್ತು ಸೆಸ್ಕ್ ಇಂಜಿನಿಯರ್‌ಗಳ ಸಭೆ ನಡೆಸಿದರು. ಸೌಮ್ಯಾ, ಸಿ. ಸ್ವಾಮಿ, ಕಾವ್ಯಾ, ಚಿದಂಬರಂ, ಶಿವಕುಮಾರ್ ಇದ್ದರು. 
ನ್ಯೂಸ್

ವಿದ್ಯುತ್ ವಿತರಣಾ ಕೇಂದ್ರಕ್ಕೆ ವಿರೋಧಿಸಿದರೆ ಪೊಲೀಸರ ಸಹಾಯ ಪಡೆಯಿರಿ

ಅರಕಲಗೂಡು: ತಾಲೂಕಿನ ಅಲ್ಲಾಪಟ್ಟಣದಲ್ಲಿ 220 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಜಾಗದ ಸಂಬಂಧ ಸ್ಥಳೀಯರಿಂದ ವಿರೋಧ ವ್ಯಕ್ತವಾದರೆ ಪೊಲೀಸ್ ರಕ್ಷಣೆ ಪಡೆದು ಅಳತೆ ಕಾರ್ಯ ಪೂರ್ಣಗೊಳಿಸಿ ಹದ್ದುಬಸ್ತಿನಲ್ಲಿಡಬೇಕು ಎಂದು ಶಾಸಕ ಎ.ಮಂಜು ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಕಣಿಯಾರು ಬಳಿ ನಾನು ಸಚಿವನಾಗಿದ್ದ ವೇಳೆ 150 ಕೋಟಿ ರೂ. ವೆಚ್ಚದಲ್ಲಿ 220 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿತ್ತು. ಆದರೆ ಕಣಿಯಾರು ಬಳಿ ಡೀಮ್ಡ್ ಅರಣ್ಯ ಪ್ರದೇಶ ಸ್ವಾಧೀನ ಸಂಬಂಧ ಕಾನೂನು ತೊಡಕುಗಳು ಎದುರಾದ ಕಾರಣ ಈಗ ಅಲ್ಲಾಪಟ್ಟಣ ಬಳಿ ಸರ್ವೇ ನಂ.59ರಲ್ಲಿ 7.10 ಎಕರೆ ಸರ್ಕಾರಿ ಗೋಮಾಳ ಜಾಗವನ್ನು ನಿಯಮಾನುಸಾರ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇದಕ್ಕೆ ಸ್ಥಳೀಯರಿಂದ ವಿರೋಧ ಉಂಟಾದರೆ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನೆರವಿನೊಂದಿಗೆ ಅಳತೆ ಕಾರ್ಯ ನಡೆಸಿ ಜಾಗದ ಸುತ್ತಲೂ ಟ್ರಂಚ್ ತೆಗೆಸುವಂತೆ ಹಾಸನ ಕೆಪಿಟಿಸಿಎಲ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಿರಣ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬೆಮ್ಮತ್ತಿ, ಸಂತೆಮರೂರು, ಸಿದ್ದಾಪುರ, ಬನ್ನಿಮರದಕೊಪ್ಪಲು ಬಳಿ 66 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲಾಗುವುದು. ಈ ಯೋಜನೆಗಳು ಕಾರ್ಯಗತವಾದರೆ ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಗಲಿದೆ. ಸಿದ್ದಾಪುರ, ಮಗ್ಗೆ ಭಾಗ ಸೇರಿದಂತೆ ಅಗತ್ಯವಿರುವೆಡೆ ನಾಲಾ ಏರಿ ಮೇಲೆ ಸೋಲಾರ್ ಪ್ಯಾನಲ್ ಸ್ಥಾಪನೆಗೆ ಅಗತ್ಯ ಕ್ರಮ ವಹಿಸುವಂತೆ ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಿದಂಬರಂ, ಚಿನ್ನಸ್ವಾಮಿ ಅವರಿಗೆ ಸೂಚನೆ ನೀಡಿದರು.

ತಹಸೀಲ್ದಾರ್ ಸೌಮ್ಯಾ, ತಾಲೂಕು ಕಚೇರಿ ಶಿರಸ್ತೇದಾರ್ ಸಿ.ಸ್ವಾಮಿ, ಕೆಪಿಟಿಸಿಲ್ ಸಹಾಯಕ ಇಂಜಿನಿಯರ್ ನರೇಂದ್ರ, ಭೂ ಮಾಪನ ಇಲಾಖೆ ಅಧಿಕಾರಿ ಶಿವಕುಮಾರ್ ಇದ್ದರು.