ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಸಕ್ಷಮ ನ್ಯಾಯಾಲಯವು ಆರೋಪ ನಿಗದಿಗೂ ಮುನ್ನ ವಾದ ಆಲಿಸುವ ಸಂಬಂಧ ವಿಚಾರಣೆಗೆ ಅರ್ಜಿ ನಿಗದಿಗೊಳಿಸಿದರೆ, ಶಾಸಕ ಬಿ. ನಾಗೇಂದ್ರ ನ್ಯಾಯಾಲಯದ ಕದತಟ್ಟುವ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ಹೈಕೋರ್ಟ್ ಹೇಳಿದೆ.
ವಾಲ್ಮೀಕಿ ನಿಗಮದ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾಯಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದು ಕೋರಿ ನಾಗೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಜಾರಿ ನಿರ್ದೇಶನಾಲಯವು ಸೆ.9ರಂದು ಪಿಎಂಎಲ್ ಕಾಯ್ದೆಯ ಸೆಕ್ಷನ್ 4ರ ಅಡಿ ತನ್ನನ್ನು ಮೊದಲ ಆರೋಪಿಯನ್ನಾಗಿಸಿ ದಾಖಲಿಸಿರುವ ದೂರು ವತ್ತು ಈ ಸಂಬಂಧ ವಿಚಾರಣಾಧೀನ ನ್ಯಾಯಾಲಯವು 2024ರ ಅ.5 ರಂದು ಸಂಜ್ಞೆ ತೆಗೆದುಕೊಂಡಿರುವುದು ಹಾಗೂ ಆ ನಂತರದ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಪೀಠವು, ಪ್ರಕರಣದಲ್ಲಿ ಸಂಜ್ಞೆ ಪರಿಗಣಿಸುವ ಸಂಬಂಧ ಸಕ್ಷಮ ನ್ಯಾಯಾಲಯ ಅನುಸರಿಸಿರುವ ನೀತಿಯು ದೋಷಪೂರಿತವಾಗಿದೆ. ಜಾರಿ ನಿರ್ದೇಶನಾಲಯದ ಪರ ವಕೀಲ ಪಿ.ಪ್ರಸನ್ನಕುಮಾರ್ ಶೀಘ್ರದಲ್ಲೇ ಆಕ್ಷೇಪಣೆ ಸಲ್ಲಿಸಲಾಗುವುದು ಎಂದಿದ್ದಾರೆ. ಹೀಗಾಗಿ, ಪ್ರಕರಣದ ವಿಚಾರಣೆ 2025ರ ಜ.9ಕ್ಕೆ ನಿಗದಿಪಡಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.