ಸಾಗರದಲ್ಲಿ ಆಯೋಜಿಸಿದ್ದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೋತ್ಸವದಲ್ಲಿ ಆಯನೂರು ಕೋಟೆ ಆಂಜನೇಯಸ್ವಾಮಿ ದೇವಾಲಯದ ಅರ್ಚಕ ಪ್ರಮೋದಾಚಾರ್ ಅವರಿಗೆ ಅನಂತ ಸೇವಾ ಪುರಸ್ಕಾರ ಪ್ರದಾನ ಮಾಡಲಾಯಿತು. ವೆಂಕಟೇಶ್ ಕಟ್ಟಿ, ಆನಂದ ಕಲ್ಯಾಣಿ, ಡಾ. ಗುರುರಾಜ್ ಕಲ್ಲಾಪುರ, ಪಿ.ಜಿ.ಸಹನಾ, ಸುಧಾ, ಮಂಜುಳಾ ಇತರರಿದ್ದರು.  
ನ್ಯೂಸ್

ನಿರ್ಮಲವಾದ ಭಕ್ತಿಯಿಂದ ಭಗವಂತನ ದರ್ಶನ

ಶಿವಕುಮಾರ ಎಸ್.ಪಿ.

ಸಾಗರ: ಆಡಂಬರದ ಪೂಜೆಯಿಂದ ಭಗವಂತನ ಸಾಕ್ಷಾತ್ಕಾರ ಆಗುವುದಿಲ್ಲ. ನಿರ್ಮಲವಾದ ಭಕ್ತಿಯೇ ಪ್ರಧಾನವಾದುದು ಎಂದು ಮೈಸೂರಿನ ಪಂಡಿತ ಅನಂತ ಪದ್ಮನಾಭಾಚಾರ್ ಹೇಳಿದರು.

ಸಾಗರದ ಮಧ್ವ ಮಂದಿರದಲ್ಲಿ ಆಯೋಜಿಸಿದ್ದ ರಾಘವೇಂದ್ರ ಸ್ವಾಮಿಗಳ ಆರಾಧನೋತ್ಸವದಲ್ಲಿ ಸಮಾಜದಿಂದ ಕೊಡಮಾಡುವ ಅನಂತ ಸೇವಾ ಪುರಸ್ಕಾರವನ್ನು ಆಯನೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಪ್ರಮೋದಾಚಾರ್ ಕಲ್ಲಾಪುರ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.

ಸೇವೆ ನಮ್ಮ ಅಹಂಕಾರವೂ ಆಗಬಾರದು, ಆಡಂಬರವೂ ಆಗಬಾರದು. ನಮ್ಮ ಅಂತರಾಳದಲ್ಲಿರುವ ಪರಮಾತ್ಮನಿಗೆ ಎಲ್ಲವನ್ನೂ ಸಮರ್ಪಿಸಬೇಕು. ಕಲಿಯುಗದ ಕಾಮಧೇನು, ಕಲ್ಪವೃಕ್ಷ ಗುರುಸಾರ್ವಭೌಮ ರಾಘವೇಂದ್ರರು ನಾವು ಬೇಡಿದ್ದನ್ನೆಲ್ಲ ಕರುಣಿಸುತ್ತಿದ್ದಾರೆ. ನಾವು ಈ ಭೂಮಿಗೆ ಬಂದಮೇಲೆ ಋಣ ತೀರಿಸಬೇಕಾದುದು ನಮ್ಮ ಧರ್ಮ ಎಂದರು.

ಪ್ರತಿಯೊಬ್ಬರೂ ಸೇವಾಭಾವನೆ ಬೆಳೆಸಿಕೊಳ್ಳಬೇಕು. ಸಾಗರದಲ್ಲಿ ಮೂರು ದಿನಗಳ ಕಾಲ ಗುರುಸಾರ್ವಭೌಮರ ಆರಾಧನೆಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಸಲಾಗಿದೆ. ಪ್ರತಿವರ್ಷ ಸಂಸ್ಕೃತಿ, ಸಂಸ್ಕಾರವನ್ನು ಮುನ್ನಡೆಸುತ್ತಿರುವವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ. ರಾಘವೇಂದ್ರ ಸ್ವಾಮಿಗಳ ಗ್ರಂಥಗಳನ್ನು ಯುವಜನತೆಗೆ ಪರಿಚಯಿಸುವ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕು ಎಂದು ತಿಳಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಮೋದಾಚಾರ್ ಮಾತನಾಡಿ, ನಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ. ಸಿದ್ಧಿಯಿಲ್ಲದೆ ಯಾವುದೂ ನಮಗೆ ಲಭ್ಯವಾಗುವುದಿಲ್ಲ. ಆಚರಣೆ, ಆರಾಧನೆಯನ್ನು ವ್ಯಾವಹಾರಿಕವಾಗಿ ನೋಡುವುದು ಒಳ್ಳೆಯ ಬೆಳವಣಿಗೆಯಲ್ಲ. ಇತ್ತೀಚೆಗೆ ಸಂಸ್ಕೃತ ಕಲಿಕೆ ಬಗ್ಗೆ ಯುವಜನರು ಹೆಚ್ಚಿನ ಆಸಕ್ತಿ ತೋರುತ್ತಿರುವುದು ಒಳ್ಳೆಯ ಬೆಳವಣಿಗೆ. ಶ್ರೀಮಠಗಳು ಗುರುಕುಲ ಮಾದರಿಯ ಶಿಕ್ಷಣ ನೀಡುತ್ತ ಸಂಸ್ಕೃತಿ, ಸಂಸ್ಕಾರದ ಮಹತ್ವ ಪರಿಚಯಿಸುತ್ತಿದೆ ಎಂದರು.

ಮಾಧ್ವ ಸಂಘದ ಗೌರವಾಧ್ಯಕ್ಷ ಡಾ. ಗುರುರಾಜ್ ಕಲ್ಲಾಪುರ ಮಾತನಾಡಿ, ಶ್ರೀ ರಾಘವೇಂದ್ರ ಸ್ವಾಮಿಗಳ ಗ್ರಂಥಗಳ ಕುರಿತು ಇನ್ನಷ್ಟು ಬೆಳಕು ಚೆಲ್ಲುವ ಕೆಲಸ ಆಗಬೇಕಿದೆ. ಹಾಗಾಗಿ ಪ್ರತಿವರ್ಷ ಆರಾಧನೆಯಲ್ಲಿ ರಾಯರ ಗ್ರಂಥಗಳ ಕುರಿತು ಚಿಂತನ-ಮಂಥನ ನಡೆಸುವ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ಎಂದು ತಿಳಿಸಿದರು.

ಲೋಕಕಲ್ಯಾಣಾರ್ಥ ಪವಮಾನ ಹೋಮ ನಡೆಸಲಾಯಿತು. ಸಾಗರ ಮಾಧ್ವ ಸಂಘದ ಅಧ್ಯಕ್ಷ ವೆಂಕಟೇಶ್ ಕಟ್ಟಿ, ಕಾರ್ಯದರ್ಶಿ ಬದರೀಶ್, ದೀಪಕ್ ಸಾಗರ್, ಆನಂದ ಕಲ್ಯಾಣಿ, ಪಿ.ಜಿ.ಸಹನಾ, ವಾದಿರಾಜ್ ಸಾಬಾಜಿ, ಹರ್ಷವರ್ಧನ್, ನಾಗರಾಜ್, ಸುಧಾ, ಮಂಜುಳಾ ಬದರಿನಾಥ್, ಜಯಭಾರತಿ, ಜ್ಯೋತಿ, ರೇವತಿ ಹತ್ವಾರ್ ಇತರರಿದ್ದರು.