ನ್ಯೂಸ್

ಸಿಎಎ ವಿರುದ್ಧ ನಾಟಕವಾಡಿದ್ದ ಬೀದರ್​ನ ಶಾಹೀನ್​ ಶಾಲೆಯೀಗ ಕರೊನಾ ಕ್ವಾರಂಟೈನ್‌ ಕೇಂದ್ರ

ಬೀದರ್‌: ಪ್ರಧಾನಿ ಮೋದಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ನಾಟಕ ಮಾಡಿ ಭಾರಿ ವಿವಾದ ಸೃಷ್ಟಿಸಿದ್ದ ಇಲ್ಲಿಯ ಶಾಹೀನ್‌ ಪ್ರಾಥಮಿಕ ಶಾಲೆಯೀಗ ಕ್ವಾರಂಟೈನ್‌ ಕೇಂದ್ರವಾಗಿ ಪರಿವರ್ತನೆಗೊಂಡಿದೆ.

ಈ ಶಾಲೆಯನ್ನು ಕ್ವಾರಂಟೈಸ್‌ ಕೇಂದ್ರವಾಗಿಸಲು ಬೀದರ್‌ ಜಿಲ್ಲಾಡಳಿತವು ಶಾಹೀನ್‌ ಗ್ರೂಪ್‌ ಆಫ್‌ ಇನ್ಸ್‌ಟಿಟ್ಯೂಟ್‌ನ ಮುಖ್ಯಸ್ಥ ಡಾ. ಅಬ್ದುಲ್‌ ಖಾದೀರ್‌ ಅವರನ್ನು ಮನವಿ ಮಾಡಿಕೊಂಡಿತ್ತು. ಕರೊನಾ ಸೋಂಕು ಶಂಕಿತರನ್ನು ಇಲ್ಲಿ ಇರಿಸುವ ಸಂಬಂಧ ಅನುಮತಿ ಕೇಳಲಾಗಿತ್ತು. ಅದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದರು.

ಈ ಮೊದಲು ಶಂಕಿತರನ್ನು ಬೀದರ್‌ನ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಾಸ್ಟೆಲ್‌ನಲ್ಲಿ ಇಡಲಾಗಿತ್ತು. ಆದರೆ ಸ್ಥಳೀಯರಿಂದ ಭಾರಿ ಪ್ರತಿರೋಧ ಬಂದ ಹಿನ್ನೆಲೆಯಲ್ಲಿ ಅವರನ್ನು ಬೇರೆಡೆ ಸ್ಥಳಾಂತರ ಮಾಡುವ ಅನಿವಾರ್ಯತೆ ಉಂಟಾಗಿತ್ತು.

ನಾವು ಕರೊನಾ ಶಂಕಿತರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಆಹಾರ, ಮಾಸ್ಕ್‌ ಸೇರಿದಂತೆ ಸಕಲ ಸೌಲಭ್ಯಗಳನ್ನೂ ನೀಡುತ್ತಿದ್ದೇವೆ. ಆರೋಗ್ಯ ಸಿಬ್ಬಂದಿ ಕೂಡ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇಲ್ಲಿ ಕ್ವಾರಂಟೈನ್‌ ಅವಧಿ ಮುಗಿದ ಮೇಲೆ ಅವರನ್ನು ಹೋಮ್‌ ಕ್ವಾರಂಟೈನ್‌ಗೆ ಕಳುಹಿಸಲಾಗುವುದು. ಅಲ್ಲಿಯವರೆಗೆ ಅವರನ್ನು ಶಾಹೀನ್‌ ಪ್ರಾಥಮಿಕ ಶಾಲೆಯಲ್ಲಿ ಇರಿಸಲಾಗುವುದು’ ಎಂದು ಉಪವಿಭಾಗಾಧಿಕಾರಿ ಅಕ್ಷಯ್‌ ಸಿಂಗ್‌ ತಿಳಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ನಾಟಕದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಮುಹಮ್ಮದ್‌ ಯುಸೂಫ್‌ ರಹೀಂ ಎನ್ನುವವರು ಹಂಚಿಕೊಂಡಿದ್ದರು. ಇದರ ವಿರುದ್ಧ ಸಾಮಾಜಿಕ ಕಾರ್ಯಕರ್ತ ನೀಲೇಶ್‌ ರಕ್ಷಾಳ್‌ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ದೇಶ ದ್ರೋಹ ಕಾಯಿದೆ ಅಡಿ ಪ್ರಕರಣ ದಾಖಲಾಗಿದೆ. ನಂತರ ಈ ನಾಟಕ ಮಾಡಿದ ತಪ್ಪಿಗೆ ಮುಖ್ಯ ಶಿಕ್ಷಕ ಫರೀದಾ ಬೇಗಂ ಹಾಗೂ ವಿದ್ಯಾರ್ಥಿಯೊಬ್ಬರ ಪಾಲಕರಾದ ಅನುಜಾ ಮಿನ್ಸಾ ಅವರನ್ನು ಬಂಧಿಸಲಾಗಿತ್ತು. ಇವರ ವಿರುದ್ಧ ದೇಶದ್ರೋಹ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ವಿಚಾರಣೆ ನಡೆಯುತ್ತಿದೆ.