ನವದೆಹಲಿ: ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಏರ್ ಇಂಡಿಯಾ ಕಾರ್ಯಾಚರಣೆಯಲ್ಲಿ 51 ಸುರಕ್ಷಾ ಲೋಪಗಳು ಇರುವುದನ್ನು ವಾರ್ಷಿಕ ವರದಿಯಲ್ಲಿ ಪತ್ತೆ ಮಾಡಿದೆ. ಕಡ್ಡಾಯ ವೈಮಾನಿಕ ಸುರಕ್ಷಾ ಮಾನದಂಡಗಳನ್ನು ವಿಮಾನಯಾನ ಸಂಸ್ಥೆ ಸರಿಯಾದ ಪಾಲನೆ ಮಾಡದಿರುವುದು ಈ ಮೂಲಕ ಕಂಡುಬಂದಿದೆ. ಅವಧಿ ಮೀರಿದ ತರಬೇತಿ ಕೈಪಿಡಿಗಳು, ವಿಘಟಿತ ತರಬೇತಿ ದಾಖಲೆಗಳು, ಪೈಲಟ್ ತರಬೇತಿ ಕೊರತೆ, ಅನರ್ಹ ಸಿಮ್ಯುಲೇಟರ್ಗಳು, ವಿಮಾನ ರೋಸ್ಟರ್ಗಳನ್ನು ನಿರ್ವಹಿಸಲು ತರಬೇತಾಗದ ಸಿಬ್ಬಂದಿ, ಕಡಿಮೆ ಗೋಚರತೆಯ ಕಾರ್ಯಾಚರಣೆಗೆ ಅನುಮೋದನೆಗಳಲ್ಲಿನ ಅಕ್ರಮಗಳು ಸೇರಿ ಹಲವು ಲೋಪಗಳು ಇರುವುದನ್ನು ಡಿಜಿಸಿಎ ಬಹಿರಂಗಪಡಿಸಿದೆ. ಆ ಪೈಕಿ ಗಂಭೀರ ಒಂದನೇ ಹಂತದ 7 ಉಲ್ಲಂಘನೆಗಳಿದ್ದು, ತಕ್ಷಣ ಸರಿಪಡಿಸಬೇಕಾದ್ದಾಗಿವೆ. ಉಳಿದ 44 ಅನುಸರಣೆ ಕೊರತೆಗಳನ್ನು ಆ.23ರ ಒಳಗೆ ಪೂರೈಸಿಕೊಳ್ಳಬೇಕಿದೆ. ಈ ಬಗ್ಗೆ ಪುರಾವೆ ಸಹಿತ ಮಾಹಿತಿ ನೀಡುವಂತೆಯೂ ಡಿಜಿಸಿಎ ತಿಳಿಸಿದೆ.