ಬೆಂಗಳೂರು: ಸುರಕ್ಷತೆಯ ದೃಷ್ಟಿಯಿಂದ ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಮಲ್ಲೇಶ್ವರ ಬಿಜೆಪಿ ಕಚೇರಿ ಸ್ಫೋಟಕ್ಕೆ ಉಗ್ರರ ಸಂಚು ರೂಪಿಸಿದ ವಿಚಾರವು ರಾಷ್ಟ್ರಿಯ ತನಿಖಾ ದಳ(ಎನ್‌ಐಎ) ಕೋರ್ಟ್‌ಗೆ ಸಲ್ಲಿಸಿದ ಚಾಜ್‌ಶೀಟ್‌ನಲ್ಲಿ ಉಲ್ಲೇಖವಾದ ಬೆನ್ನಲ್ಲೆ ಮೆಟಲ್ ಡಿಟೆಕ್ಟರ್ ಮೂಲಕ ಪ್ರತಿಯೊಬ್ಬರನ್ನು ಪರಿಶೀಲಿಸಿದ ಬಳಿಕ ಬಿಜೆಪಿ ಕಚೇರಿ ಒಳಗೆ ಬಿಡಲಾಗುತ್ತಿದೆ. ಈ ಹಿಂದೆ ವಿವಿಐಪಿಗಳು ಬಂದಾಗ ಮಾತ್ರ ಮೆಟಲ್ ಡಿಟೆಕ್ಟರ್ ಬಳಸಲಾಗುತ್ತಿತ್ತು. ಆದರೀಗ ಪ್ರತಿ ದಿನ ಮೆಟಲ್ ಡಿಟೆಕ್ಟರ್ ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಟಲ್ ಡಿಟೆಕ್ಟರ್ ಮೂಲಕವೇ ಬಿಜೆಪಿ ಕಚೇರಿಗೆ ಬರುವವರ ಒಳ ಪ್ರವೇಶ ಕಡ್ಡಾಯ ಮಾಡಲಾಗಿದೆ. ಇದರ ಜತೆಗೆ ಪ್ರವೇಶ ದ್ವಾರದ ಎದುರು ೩-೪ ಜನ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಮಲ್ಲೇಶ್ವರ ಪೊಲೀಸ್ ಠಾಣೆ ಇನ್‌ಪೆಕ್ಟರ್ ಹಾಗೂ ಸಬ್ ಇನ್‌ಸ್ಪೆಕ್ಟರ್‌ಗಳು ಬಿಜೆಪಿ ಕಚೇರಿಗೆ ನಿತ್ಯ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.
ಅಯೋಧ್ಯೆಯಲ್ಲಿ ಬಾಲ ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆ ದಿನವೇ ಬಿಜೆಪಿ ಕಚೇರಿಯಲ್ಲಿ ಬಾಂಬ್ ಸ್ಫೊಟಿಸುವ ಸಂಚನ್ನು ಐಸಿಸ್ ಶಂಕಿತ ಉಗ್ರರು ರೂಪಿಸಿದ್ದರು ಎಂಬ ಆಘಾತಕಾರಿ ವಿಚಾರ ಎನ್‌ಐಎ ತನಿಖೆಯಲ್ಲಿ ಬಯಲಾಗಿತ್ತು. ರಾಮೇಶ್ವರಂ ಕೆಫೆ ಬಾಂಬ್ ಸ್ಫೊಟ ಪ್ರಕರಣದ ಆರೋಪಿಗಳ ವಿರುದ್ಧ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ.