ಪಟನಾ: ಚುನಾವಣಾ ಅಂತಾ ಬಂದಾಗ ಅಭ್ಯರ್ಥಿಗಳು ನಾಮಪತ್ರದ ವೇಳೆ ಸಲ್ಲಿಸುವ ಮಾಹಿತಿಗಳು ಎಲ್ಲರ ಗಮನ ಸೆಳೆಯುತ್ತವೆ. ಅದರಲ್ಲೂ ಮುಖ್ಯವಾಗಿ ಆಸ್ತಿ ವಿಚಾರ. ಅದೇ ರೀತಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ( Bihar Election ) ಸ್ಪರ್ಧೆ ಮಾಡಿರುವ ಅಭ್ಯರ್ಥಿಯೊಬ್ಬರ ಆಸ್ತಿ ವಿಚಾರ ಇದೀಗ ಎಲ್ಲರ ಹುಬ್ಬೇರಿಸಿದೆ. ಏಕೆಂದರೆ, ಸೆಕ್ಯುರಿಟಿ ಗಾರ್ಡ್ ಆಗಿದ್ದ ವ್ಯಕ್ತಿ ಇಂದು 400 ಕೋಟಿ ರೂ. ಒಡೆಯರಾಗಿದ್ದಾರೆ. ಅವರ ಈ ಕೋಟಿ ಗಳಿಕೆ ಹಿಂದಿನ ಕತೆ ಕೂಡ ಇಂಟೆರೆಸ್ಟಿಂಗ್ ಆಗಿದೆ.
ಕೋಟಿ ಕತೆಯ ನಾಯಕ ನೀರಜ್ ಸಿಂಗ್. ಇವರು ಬಿಹಾರದ ಕೈಗಾರಿಕೋದ್ಯಮಿ. ಒಂದು ಕಾಲದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ನೀರಜ್ ಅವರು ಇಂದು 400 ಕೋಟಿ ರೂ. ಆದಾಯ ಇರುವ ಮುಂಚೂಣಿ ಕಂಪನಿಯ ಮಾಲೀಕರಾಗಿದ್ದಾರೆ. ಇವರ ಜೀವನ ಕತೆಯನ್ನು ಒಂದು ಸಿನಿಮಾ ಆಗಿ ನಿರ್ಮಿಸಬಹುದು. ಉದ್ಯಮಿಯಾಗಿರುವ ನೀರಜ್ ಇದೀಗ ತಮ್ಮ ಜೀವನದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದ್ದಾರೆ. ಅದೇನೆಂದರೆ, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಶಿಯೋಹರ್ ವಿಧಾನಸಭಾ ಕ್ಷೇತ್ರದಿಂದ ಜನ್ ಸುರಾಜ್ ಪಾರ್ಟಿಯಿಂದ ಕಣಕ್ಕೆ ಇಳಿಯುತ್ತಿದ್ದಾರೆ.
ಬಿಹಾರದ ಶಿಯೋಹರ್ ಜಿಲ್ಲೆಯ ಮಥುರಾಪುರ ಗ್ರಾಮದಲ್ಲಿ ಜನಿಸಿದ ನೀರಜ್ ಸಿಂಗ್, ಸಾಧಾರಣ ಕುಟುಂಬ ಹಿನ್ನೆಲೆಯಿಂದ ಬಂದವರು. ತಮ್ಮ 13ನೇ ವಯಸ್ಸಿನಲ್ಲಿ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ಬಳಿಕ, ಕುಟುಂಬಕ್ಕೆ ಆಧಾರವಾಗಲು ಕೆಲಸ ಹುಡುಕಲು ಆರಂಭಿಸಿದರು. ಆದರೆ, ಅವರಿನ್ನೂ ಚಿಕ್ಕವರಾಗಿದ್ದರಿಂದ ಯಾರು ಕೂಡ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಸಿದ್ಧರಿರಲಿಲ್ಲ. ಇದಾದ ನಂತರ, ನೀರಜ್ ಅವರು ತಮ್ಮ ಗ್ರಾಮದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಮಾಡಲು ಪ್ರಾರಂಭಿಸಿದರು.
ಸುಮಾರು ಮೂರು ವರ್ಷಗಳ ಬಳಿಕ ಮತ್ತೆ ಉದ್ಯೋಗ ಅರಸಿ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿದರು. ಅಲ್ಲಿ, ಭದ್ರತಾ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿಕೊಂಡರು. ಸುಮಾರು ಒಂದು ವರ್ಷ ಅಲ್ಲಿಯೇ ಕೆಲಸ ಮಾಡಿದರು. ಮುಂದಿನ ವರ್ಷ, ಅವರು ಪುಣೆಗೆ ತೆರಳಿ ಖಾಸಗಿ ಸಂಸ್ಥೆಯಲ್ಲಿ ಕಚೇರಿ ಸಹಾಯಕರಾಗಿ ಕೆಲಸಕ್ಕೆ ಸೇರಿದರು. ಇದಾದ ನಂತರ 2010 ರಲ್ಲಿ ಧಾನ್ಯ ವ್ಯವಹಾರದ ಮೂಲಕ ತಮ್ಮದೇ ಉದ್ಯಮವನ್ನು ಸ್ಥಾಪಿಸಿದರು.
ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬ ಮಾತಿದೆ. ಅದರಂತೆ, ನೀರಜ್ ಅವರ ಉದ್ಯಮವು ಕೂಡ ಯಶಸ್ಸು ಗಳಿಸಿತು. ಇದಾದ ಬಳಿಕ ಅವರು ಉಷಾ ಇಂಡಸ್ಟ್ರೀಸ್ ಆರಂಭಿಸಿದರು. ಇದರ ಮೂಲಕ ಇಟ್ಟಿಗೆ, ಕಟ್ಟಡದ ಬ್ಲಾಕ್ಗಳು, ಟೈಲ್ಸ್ ಮತ್ತು ಇನ್ನಿತರ ಸೆರಾಮಿಕ್ ಉತ್ಪನ್ನಗಳನ್ನು ಮಾರಾಟ ಮಾಡಲು ಆರಂಭಿಸಿದರು. ಇಷ್ಟಕ್ಕೆ ಸುಮ್ಮನಾಗದೇ ತಮ್ಮ ವ್ಯವಹಾರವನ್ನು ರಸ್ತೆ ಕಾಮಗಾರಿಗೂ ವಿಸ್ತರಿಸಿದರು. ಇತ್ತೀಚೆಗೆ ಪೆಟ್ರೋಲ್ ಬಂಕ್ ಕೂಡ ತೆರೆದಿದ್ದಾರೆ. ಬಿಹಾರದ ಮೋತಿಹಾರಿಯಲ್ಲಿರುವ ನೀರಜ್ ಅವರ ಕಂಪನಿಯಲ್ಲಿ ಪ್ರಸ್ತುತ 2000ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಈ ಕಂಪನಿ ಸುಮಾರು 400 ಕೋಟಿ ರೂ. ವಹಿವಾಟು ನಡೆಸುತ್ತಿದೆ.
ಅಂದಹಾಗೆ, ಒಂದು ಹಂತದಲ್ಲಿ, ನೀರಜ್ ಸಿಂಗ್ ಅವರ ಬಳಿ ಸೈಕಲ್ ಕೂಡ ಇರಲಿಲ್ಲ. ಕೆಲವೊಮ್ಮೆ ಸಣ್ಣಪುಟ್ಟ ಕೆಲಸಗಳಿಗೆ ನೆರೆಹೊರೆಯವರ ಸೈಕಲ್‌ಗಳನ್ನು ಎರವಲು ಪಡೆಯುತ್ತಿದ್ದರು. ಆದರೆ, ಇಂದು ಅವರ ಬಳಿ ರೇಂಜ್ ರೋವರ್ ಮತ್ತು ಅರ್ಧ ಡಜನ್ ಐಷಾರಾಮಿ ಕಾರುಗಳಿವೆ. ಇನ್ನು ನೀರಜ್ ಅವರು ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ತಮ್ಮ ಪಾಲಕರೊಂದಿಗೆ ವಾಸಿಸುತ್ತಿದ್ದಾರೆ. ಅವರಿಗೆ ಇಬ್ಬರು ಸಹೋದರರು ಕೂಡ ಇದ್ದಾರೆ. ನೀರಜ್ ಅವರು ಕಾನೂನು ಪದವಿ ಪಡೆದಿದ್ದಾರೆ.
ಸದ್ಯ ನೀರಜ್ ಅವರು ಬಿಹಾರ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅವರ ಬೆಂಬಲಿಗರು ಹೇಳುವಂತೆ ನೀರಜ್ ಅವರು ಸಾಮಾಜಿಕ ಕಲ್ಯಾಣ ಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಉದಾಹರಣೆಗೆ ಹಿಂದುಳಿದ ಮಹಿಳೆಯರ ವಿವಾಹಗಳನ್ನು ಆಯೋಜಿಸುವುದು ಮತ್ತು ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಶಿಬಿರಗಳು ಮತ್ತು ತೀರ್ಥಯಾತ್ರೆಗಳನ್ನು ಆಯೋಜಿಸುವುದು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ನೀರಜ್ ಅವರು ನಾಳೆ (ಅ.17) ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ ಮಾತನಾಡಿರುವ ನೀರಜ್, ನಿಜವಾದ ರಾಜಕೀಯವು ಜನರ ಜೀವನವನ್ನು ಬದಲಾಯಿಸುತ್ತದೆ. ನಮ್ಮ ಬಿಹಾರದಲ್ಲಿ ಎಲ್ಲವೂ ಇದೆ ಆದರೆ, ಅದನ್ನು ಸರಿಯಾಗಿ ಬಳಸಿಕೊಳ್ಳಲು ನಮಗೆ ಇಚ್ಛಾಶಕ್ತಿ ಬೇಕಿದೆ ಎಂದು ಹೇಳಿದ್ದಾರೆ. ಅಂದಹಾಗೆ, ನೀರಜ್ ಅವರು ಚುಣಾವಣಾ ಚಾಣಕ್ಯ ಎಂದೇ ಖ್ಯಾತಿಯಾಗಿರುವ ಪ್ರಶಾಂತ್ ಕಿಶೋರ್ ಅವರ ಪಕ್ಷದಿಂದ ಕಣಕ್ಕೆ ಇಳಿಯುತ್ತಿದ್ದಾರೆ. (ಏಜೆನ್ಸೀಸ್)