ನ್ಯೂಸ್

ಲಾರಿ ಡಿಕ್ಕಿ ಹೊಡೆದು ಸೆಕ್ಯೂರಿಟಿ ಗಾರ್ಡ್ ಸಾವು

ಮಂಜುನಾಥ.ಕೆ

ಬೆಂಗಳೂರು: ರಿವರ್ಸ್ ತೆಗೆದುಕೊಳ್ಳುವಾಗ ಲಾರಿ ಸೆಕ್ಯೂರಿಟಿ ಗಾರ್ಡ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟಿರುವ ಘಟನೆ ಚಿಕ್ಕಬಾಣವಾರದಲ್ಲಿ ನಡೆದಿದೆ.
ಬಿಹಾರ ಮೂಲದ ರಮಾನಾಥ್ ಸಿಂಗ್(೪೯) ಮೃತ ಸೆಕ್ಯೂರಿಟಿ ಗಾರ್ಡ್. ಶಿವರಾಮ ಕಾರಂತ ಬಡಾವಣೆಯ ಸೆಕ್ಟರ್ ೫ರಲ್ಲಿ ಕಾಮಗಾರಿ ನಡೆಯುತ್ತಿತ್ತು.ಈ ಸ್ಥಳಕ್ಕೆ ಭಾನುವಾರ ರಾತ್ರಿ ೭.೩೦ರ ಸುಮಾರಿಗೆ ಪೈಪ್‌ಗಳನ್ನು ತುಂಬಿಕೊಂಡು ಬಂದಿದ್ದ ಲಾರಿ ಚಾಲಕ, ಪೈಪ್‌ಗಳನ್ನು ಅನ್‌ಲೋಡ್ ಮಾಡಿ ವಾಪಸ್ ತೆರಳಲು ಲಾರಿಯನ್ನು ರಿವರ್ಸ್ ತೆಗೆದುಕೊಳ್ಳುತ್ತಿದ್ದ. ಈ ವೇಳೆ ತುಂಬ ಕತ್ತಲಾಗಿದ್ದರಿಂದ ಹಿಂದೆ ಸೆಕ್ಯೂರಿಟಿ ಗಾರ್ಡ್ ನಿಂತಿರುವುದು ಗಮನಿಸದೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸೆಕ್ಯೂರಿಟಿ ಗಾರ್ಡ್ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಸಮೀಪದ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ, ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಲಾರಿ ಬಿಟ್ಟು ಪರಾರಿಯಾಗಿರುವ ಚಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿಕ್ಕಬಾಣವಾರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.