ಕೋಲ್ಕತ: ಇಲ್ಲಿನ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ಕಾಲೇಜಿನ ಸೆಕ್ಯುರಿಟಿ ಗಾರ್ಡ್ನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಸಿಸಿಟಿವಿ ಪರಿಶೀಲನೆ ವೇಳೆ ಕೃತ್ಯ ನಡೆದಾಗ ಸೆಕ್ಯುರಿಟಿ ಗಾರ್ಡ್ ಕಾಲೇಜಿನಲ್ಲೇ ಇರುವುದು ಪತ್ತೆಯಾಗಿದೆ. ಮೂವರು ಆರೋಪಿಗಳು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದಾಗ ಅವರನ್ನು ತಡೆಯುವ ಪ್ರಯತ್ನವನ್ನು ಈತ ಏಕೆ ಮಾಡಲಿಲ್ಲ. ಯಾರ ಆದೇಶದಂತೆ ಆತ ತನ್ನ ಕೊಠಡಿಯಿಂದ ಹೊರಗೆ ತೆರಳಿದ್ದ ಎಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರ ನೀಡುತ್ತಿಲ್ಲ. ಆತ ಅಪರಾಧ ಕೃತ್ಯವನ್ನು ತಡೆಯಲು ವಿಫಲವಾಗಿದ್ದು, ಇದೂ ಅಪರಾಧದಲ್ಲಿ ಒಂದು ರೀತಿಯ ಭಾಗವಹಿಸುವಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಎಸ್ಐಟಿ ರಚನೆ: ಅತ್ಯಾಚಾರ ಪ್ರಕರಣದ ತನಿಖೆಗಾಗಿ ಎಸಿಪಿ ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ಐವರ ಸದಸ್ಯರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದ್ದು, ತಕ್ಷಣದಿಂದಲೇ ತನಿಖೆ ಆರಂಭಿಸಲಿದೆ ಎಂದು ಕೋಲ್ಕತ ಪೊಲೀಸ್ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಮುಖ್ಯ ಕಾರ್ಯದರ್ಶಿಗೆ ಪತ್ರ: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹತ್ಕರ್ ಅವರು ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು ಆಯೋಗದ ಸದಸ್ಯೆಯೊಬ್ಬರು ಅತ್ಯಾಚಾರ ಸಂತ್ರಸ್ತೆ ಮತ್ತು ಅವರ ಕುಟುಂಬಸ್ಥರೊಂದಿಗೆ ಸಭೆ ನಡೆಸಲು ರಾಜ್ಯ ಪೊಲೀಸರ ಸಹಕಾರ ನೀಡುವಂತೆ ನಿರ್ದೇಶನ ನೀಡಲು ಕೋರಿದ್ದಾರೆ. ಆಯೋಗದ ಸದಸ್ಯೆ ಅರ್ಚನಾ ಮಜುಮ್ದಾರ್ ಅತ್ಯಾಚಾರ ಸಂತ್ರಸ್ತೆ ಮತ್ತು ಅವರ ಕುಟುಂಬಸ್ಥರನ್ನು ಭೇಟಿಯಾಗಿ ಅವರಿಂದ ಮಾಹಿತಿ ಸಂಗ್ರಹಿಸಲು ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಬೇಕು. ಸಂತ್ರಸ್ತೆ ಮತ್ತು ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ಕಲ್ಪಿಸಬೇಕು, ಸಂತ್ರಸ್ತೆಗೆ ಗೌಪ್ಯ ವೈದ್ಯಕೀಯ ಪರೀಕ್ಷೆ ನಡೆಸಬೇಕು ಮತ್ತು ಆಂತರಿಕ ಹಾಗೂ ಬಾಹ್ಯ ವೈದ್ಯಕೀಯ ವರದಿಗಳನ್ನು ಮೂರು ದಿನದಲ್ಲಿ ಆಯೋಗಕ್ಕೆ ಸಲ್ಲಿಸಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.
ಕುತ್ತಿಗೆಯಲ್ಲಿ ಗಾಯ: ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ತಪಾಸಣೆ ವೇಳೆ ಆಕೆಯ ಕುತ್ತಿಗೆ ಮತ್ತು ಎದೆಯ ಭಾಗದಲ್ಲಿ ಗಾಯದ ಗುರುತುಗಳು ಪತ್ತೆಯಾಗಿದೆ. ಇದು ಆಕೆ ಕಸ್ಬಾ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಇರುವ ವಿವರಗಳನ್ನು ದೃಢೀಕರಿಸುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಿಜೆಪಿಯಿಂದ ಸಮಿತಿ ರಚನೆ: ಅತ್ಯಾಚಾರ ಪ್ರಕರಣದ ತನಿಖೆಗೆ ಬಿಜೆಪಿ ಪಕ್ಷ ಕೇಂದ್ರ ಸಚಿವರಾದ ಸತ್ಪಾಲ್ ಸಿಂಗ್, ಮೀನಾಕ್ಷಿ ಲೇಖಿ ಮತ್ತು ಸಂಸದರಾದ ಬಿಪ್ಲಬ್ ದೇಬ್ ಮತ್ತು ಮನನ್ ಮಿಶ್ರಾರನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ. ಸಮಿತಿ ಶೀಘ್ರವೇ ಕೋಲ್ಕತಕ್ಕೆ ಭೇಟಿ ನೀಡಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾಗೆ ವರದಿ ಸಲ್ಲಿಸಲಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ತಿಳಿಸಿದ್ದಾರೆ.
ಕಾನೂನು ವಿದ್ಯಾರ್ಥಿನಿ ಮೇಲೆ ಆಕೆಯ ಸ್ನೇಹಿತನೇ ಅತ್ಯಾಚಾರ ಎಸಗಿದ್ದಾನೆ, ಅದಕ್ಕೆ ನಾವೇನು ಮಾಡಲು ಸಾಧ್ಯ. ಪೊಲೀಸರು ಪ್ರತಿಯೊಂದು ಶಾಲೆ, ಕಾಲೇಜಿನಲ್ಲಿ ಇರಲು ಸಾಧ್ಯವೇ? ಕೆಲವು ಪುರುಷರು ಹೀಗೆ ವಿಕೃತವಾಗಿ ಅತ್ಯಾಚಾರ ಮಾಡುತ್ತಾರೆ. ಹಾಗಾಗಿ ಮಹಿಳೆಯರು ಈ ವಿಕೃತ ಪುರುಷರ ವಿರುದ್ಧ ಹೋರಾಡಬೇಕು ಎಂದು ತೃಣಮೂಲ ಕಾಂಗ್ರೆಸ್ನ ಸಂಸದ ಕಲ್ಯಾಣ್ ಬ್ಯಾನರ್ಜಿ ತಿಳಿಸಿದ್ದಾರೆ. ಬ್ಯಾನರ್ಜಿ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.