ನ್ಯೂಸ್

ಸಂಸತ್ ಭವನದಲ್ಲಿ ಭದ್ರತಾ ಲೋಪ; ಆರೋಪಿಗಳಿಗೆ ಸಿಕ್ಕಿತ್ತು ಪ್ರತಾಪ್​ ಸಿಂಹ ಕಚೇರಿಯಿಂದ ಪಾಸ್​​

ನವದೆಹಲಿ: ಸಂಸತ್ ಭವನದ ಭದ್ರತೆಯಲ್ಲಿ ಭಾರಿ ಭದ್ರತಾ ಲೋಪವಾಗಿರುವ ಘಟನೆ ಇಂದು ನಡೆದಿದೆ. ಲೋಕಸಭೆ ಕಲಾಪ ನಡೆಯುತ್ತಿದ್ದಾಗ ಸಂದರ್ಶಕರ ಗ್ಯಾಲರಿಯಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ದಿಢೀರನೆ ಸದನಕ್ಕೆ ಜಿಗಿದು ಅವಾಂತರ ಸೃಷ್ಟಿಸಿ ಭಯದ ವಾತಾವರಣ  ನಿರ್ಮಾಣ ಮಾಡಿದ ಆರೋಪಿಗಳನ್ನು ಈಗಾಗಲೇ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಈ ಘಟನೆ ನಡೆದ ಬೆನ್ನಲ್ಲೇ  ಇವರು ಯಾರು? ಇವರ ಉದ್ದೇಶ ಎನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ.

ಸಂಸತ್ ಮೇಲೆ ಉಗ್ರ ದಾಳಿ ನಡೆದು ಇಂದಿಗೆ 22 ವರ್ಷ. ಇದೇ ದಿನ ಲೋಕಸಭೆಯಲ್ಲಿ ಭದ್ರತಾಲೋಪ ಸಂಭವಿಸಿದ್ದು ದಿಗಿಲು ಹುಟ್ಟಿಸಿದೆ.  ಇಬ್ಬರು ಯುವಕರು ಗ್ಯಾಲರಿಯಿಂದ ಜಿಗಿದರು. ಅವರು ಅನಿಲ ಹೊರಸೂಸುವಂಥಾ ಏನೋ ವಸ್ತು ಎಸೆದರು, ಅವರನ್ನು ಸಂಸದರು ಹಿಡಿದಿದ್ದಾರೆ..ಆಮೇಲೆ, ಅವರನ್ನು ಭದ್ರತಾ ಸಿಬ್ಬಂದಿಗಳು ಹೊರಗೆ ಕರೆತಂದರು. ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಓರ್ವ ಪುರುಷ ಮತ್ತು ಮಹಿಳೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಇದೀಗ ತಿಳಿದು ಬಂದಿರುವ ಮಾಹಿತಿ ಪ್ರಕಾರ, ಆರೋಪಿಗಳಲ್ಲಿ ಸಾಗರ್​ ಶರ್ಮ ಎಂಬಾತ ಮೈಸೂರು ಸಂಸದ ಪ್ರತಾಪ್​ ಸಿಂಹ ಅವರ ಹೆಸರಲ್ಲಿ ಪಾಸ್​ ಪಡೆದು ನುಗ್ಗಿದ್ದಾನೆ. ಮತ್ತೊಬ್ಬ ಆರೋಪಿ ಮೈಸೂರು ಮೂಲದ ಇಂಜಿನಿಯರ್​ ಮನೋರಂಜನ್​ ಡಿ ಎಂದು ಗುರುತಿಸಲಾಗಿದೆ. ಇಬ್ಬರನ್ನು ಸಹ ಬಂಧಿಸಲಾಗಿದೆ.

ಇದೇ ಸಮಯದಲ್ಲಿ ಓರ್ವ ಪುರುಷ ಮತ್ತು ಮಹಿಳೆ ಸಂಸತ್ತಿನ ಹೊರಭಾಗದಲ್ಲಿ ಹಳದಿ ಬಣ್ಣ ಹೊರಸೂಸುವ ವಸ್ತುವನ್ನು ಹಿಡಿದು ಪ್ರತಿಭಟನೆ ನಡೆಸಿದರು. ಇಬ್ಬರು ಸಾರಿಗೆ ಭವನದ ಎದುರು ಪೊಲೀಸರು ಬಂಧಿಸಿದ್ದು, ಅವರನ್ನು 42 ವರ್ಷದ ನೀಲಂ ಮತ್ತು 25 ವರ್ಷದ ಅಮೋಲ್ ಶಿಂಧೆ ಎಂದು ಗುರುತಿಸಲಾಗಿದೆ. ನೀಲಂ ಹರಿಯಾಣದ ಹಿಸಾರ್ ನಿವಾಸಿ ಮತ್ತು ಅಮೋಲ್ ಶಿಂಧೆ ಮಹಾರಾಷ್ಟ್ರದ ಲಾತೂರ್ ನಿವಾಸಿಯಾಗಿದ್ದು, ಒಟ್ಟು ನಾಲ್ವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಆರೋಪಿಗಳಿಬ್ಬರು ಸಂಸದ ಪ್ರತಾಪ್​ ಸಿಂಹ ಅವರ ಹೆಸರಿನಲ್ಲಿ ಪಾಸ್​ ಪಡೆದಿದ್ದಾರೆ ಎಂದು ಉಚ್ಛಾಟಿತ ಬಿಎಸ್​ಪಿ ಸಂಸದ ಡ್ಯಾನಿಶ್​ ಅಲಿ ಸಹ ಗಂಭೀರ ಆರೋಪ ಮಾಡಿದ್ದಾರೆ.

ಈ ರೀತಿ ಸದನಕ್ಕೆ ನುಗ್ಗಿದ ವ್ಯಕ್ತಿಗಳು ಬಿಜೆಪಿ ನಾಯಕ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಅವರಿಗೆ ಪಾಸ್ ಪಡೆದಿದ್ದಾರೆ. ಪ್ರತಾಸ್​ ಸಿಂಹಾ ಅವರ ಆಫೀಸ್​​ನಿಂದ ಪಾಸ್​​ ಪಡೆದ ಆರೋಪಿಗಳು ಸಂಸತ್​ ಭವನಕ್ಕೆ ಎಂಟ್ರಿ ಕೊಟ್ಟಿದ್ದಾರೆ.  ಪ್ರತಾಪ್ ಸಿಂಹ  ಕಛೇರಿಯಿಂದ ಹೇಗೆ ಪಾಸ್​ ಪಡೆದಿದ್ದರು. ಇವರ ಇಬ್ಬರ ಉದ್ದೇಶ ಏನಾಗಿತ್ತು ಎನ್ನುವುದು ತನಿಖೆಯಿಂದ ತಿಳಿದು ಬರಬೇಕಾಗಿದೆ.