ನ್ಯೂಸ್

‘ಹಿಂದು ರಾಷ್ಟ್ರ’ ಘೋಷಣೆಗೆ ಗೌಪ್ಯ ತಯಾರಿ: ಬಿ.ಕೆ.ಹರಿಪ್ರಸಾದ್ ಸಂಶಯ | Revealed on Feb-3

ಬೆಂಗಳೂರು: ಜಾತ್ಯತೀತ ರಾಷ್ಟ್ರವೆಂದು ಒಪ್ಪಿಕೊಂಡ, ದೇಶದ ಸಂವಿಧಾನದಲ್ಲಿ ‘ಹಿಂದು ರಾಷ್ಟ್ರ’ವೆಂದು ಘೋಷಿಸಲು, ಪ್ರತ್ಯೇಕ ಸಂವಿಧಾನಕ್ಕೆ ತಯಾರಿ ನಡೆದಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸಂಶಯ ವ್ಯಕ್ತಪಡಿಸಿದ್ದಾರೆ.

ಸಂವಿಧಾನ ವಿರೋಧಿ ಹೇಳಿಕೆಯ ಮುಂದುವರಿದ ಭಾಗವೇ ‘ಹಿಂದು ರಾಷ್ಟ್ರ’ಕ್ಕಾಗಿ ಪ್ರತ್ಯೇಕ ಸಂವಿಧಾನ ರಚಿಸಲಾಗಿದೆ. ಇದು, ಆಘಾತಕಾರಿ ಹಾಗೂ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಗುರುಕುಲ ಪದ್ಧತಿ ಜಾರಿ, ಧರ್ಮ ಸಂಸತ್ತು, ವೇದಾಧ್ಯಯನ, ಚುನಾವಣೆಯ ಮಾನದಂಡ ಸೇರಿ ಮನುಸ್ಮತಿ ಆಧರಿಸಿ ರಚಿತ ಸಂವಿಧಾನದಲ್ಲಿ ಅಪಾಯಕಾರಿ ಅಂಶಗಳನ್ನು ಚರ್ಚಿಸಿದ್ದು, ದೇಶದ ಬಹುಸಂಖ್ಯಾತ ಸಮುದಾಯಗಳಿಗೆ ಮಾಡಿರುವ ಅಪಮಾನವಾಗಿದೆ ಎಂದು ಬಿ.ಕೆ.ಹರಿಪ್ರಸಾದ್ ದೂರಿದ್ದಾರೆ.

ಫೆ.3ರಂದು ಬಹಿರಂಗ ?

ಗುಪ್ತವಾಗಿ ತಯಾರಿ ಮಾಡಿಕೊಂಡು ಪ್ರತ್ಯೇಕ ಸಂವಿಧಾನ ರಚಿಸಲಾಗಿದೆ. ಫೆ.3ರಂದು 501 ಪುಟಗಳು ಬಹಿರಂಗವಾಗಲಿದೆ ಎನ್ನಲಾಗಿದೆ. ಕೂಡಲೇ ರಾಷ್ಟ್ರಪತಿ ಮಧ್ಯೆ ಪ್ರವೇಶಿಸಿ ಯಾವ ಕಾರಣಕ್ಕೂ ಬಹಿರಂಗವಾಗದಂತೆ ತಡೆದು, ದೇಶದ ಸ್ವಾಸ್ತ್ಯ ಕಾಪಾಡಬೇಕು ಎಂದು ಕೋರಿದ್ದಾರೆ.

ಪ್ರತಿಯೊಬ್ಬ ಭಾರತೀಯರ ಸ್ವಾಭಿಮಾನ, ಗೌರವ ಹಾಗೂ ಘನತೆಯ ಬದುಕಿನ ಹಕ್ಕು ಸಂವಿಧಾನ ನೀಡಿದೆ. ಇಂತಹ ಸಂವಿಧಾನವನ್ನೇ ಗೌಣಗೊಳಿಸಿ ಅಪಮಾನಿಸುವ ಪಟ್ಟಭದ್ರ ಹಿತಾಸಕ್ತಿಗಳ ಕೃತ್ಯ ಹಿಮ್ಮೆಟ್ಟಿಸದಿದ್ದರೆ ಬಹುತ್ವ ಹಾಗೂ ಐಕ್ಯ ಭಾರತ ಉಳಿಯುವುದಿಲ್ಲ ಎಂದು ಬಿ.ಕೆ.ಹರಿಪ್ರಸಾದ್ ಎಚ್ಚರಿಸಿದ್ದಾರೆ.