ನ್ಯೂಸ್

ಇಂಜಿನಿಯರಿಂಗ್​ ಕಾಲೇಜಿನ ಲೇಡಿಸ್​ ಟಾಯ್ಲೆಟ್​ನಲ್ಲಿ ರಹಸ್ಯ ಕ್ಯಾಮೆರಾ ಪತ್ತೆ! ವಿಡಿಯೋ ಮಾರಾಟ ಆರೋಪ

ವಿಜಯವಾಡ: ಸಮಾಜದಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳನ್ನು ನೋಡಿದರೆ ನಿಜಕ್ಕೂ ಮಹಿಳೆಯರ ಸುರಕ್ಷತೆ ಮೇಲೆ ಪ್ರಶ್ನೆ ಮೂಡದೇ ಇರದು. ಕೆಲವೆಡೆ ಮಹಿಳೆಯರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಅವರು ಘನತೆಯಿಂದ ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿಗಳು ನಿರ್ಮಾಣವಾಗಿವೆ. ಇತ್ತೀಚೆಗಷ್ಟೇ ಕೋಲ್ಕತ್ತದಲ್ಲಿ ನಡೆದ ಮಹಿಳಾ ವೈದ್ಯೆಯೊಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಿಂದ ಇಡೀ ದೇಶವೇ ಬೆಚ್ಚಿಬಿದ್ದಿದ್ದು ಗೊತ್ತೇ ಇದೆ. ಆರೋಪಿಗಳನ್ನು ಗಲ್ಲಿಗೇರಿಸಬೇಕೆಂಬ ಒತ್ತಾಯವೂ ಕೇಳಿಬಂದಿದೆ. ಆದರೂ ಪರಿಸ್ಥಿತಿ ಮಾತ್ರ ಬದಲಾಗುತ್ತಿಲ್ಲ. ಈ ಘಟನೆಯ ನಂತರವೂ ಮಹಿಳೆಯರ ಮೇಲಿನ ದೌರ್ಜನ್ಯ ಕಡಿಮೆಯಾಗುತ್ತಿಲ್ಲ. ಇತ್ತೀಚೆಗೆ ಆಂಧ್ರಪ್ರದೇಶದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಘಟನೆ ಸಂಚಲನ ಮೂಡಿಸಿದೆ. ವಿಶ್ವವಿದ್ಯಾನಿಲಯಗಳ ಸ್ಥಿತಿಗತಿಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿವೆ.

ಕೃಷ್ಣಾ ಜಿಲ್ಲೆಯ ಗುಡ್ಲವಲ್ಲೇರು ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ ನಡೆದಿದೆ. ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಪತ್ತೆಯಾಗಿದೆ. ಕೆಲ ಕ್ರಿಮಿನಲ್​ಗಳು ಮಹಿಳೆಯರ ಶೌಚಾಲಯಗಳಲ್ಲಿ ರಹಸ್ಯವಾಗಿ ಕ್ಯಾಮೆರಾ ಅಳವಡಿಸಿದ್ದಾರೆ. ಇದನ್ನು ಕಂಡ ವಿದ್ಯಾರ್ಥಿನಿಯರು ಬೆಚ್ಚಿಬಿದ್ದಿದ್ದಾರೆ. ಈ ಘಟನೆಯ ಬಗ್ಗೆ ಆಡಳಿತ ಮಂಡಳಿಗೆ ತಕ್ಷಣ ಮಾಹಿತಿ ನೀಡಲಾದರೂ, ಆಡಳಿತ ಮಂಡಳಿ ಮಾತ್ರ ಸರಿಯಾಗಿ ಸ್ಪಂದಿಸಿಲ್ಲ.

ಸರಿಯಾದ ಸ್ಪಂದನೆ ಸಿಗದಿದ್ದಾಗ ಗುರುವಾರ ಸಂಜೆ ಪ್ರತಿಭಟನೆಗೆ ಕುಳಿತ ವಿದ್ಯಾರ್ಥಿನಿಯರು ಕೂಡಲೇ ಆರೋಪಿಗಳಿಗೆ ಶಿಕ್ಷೆಯಾಗಬೇಕು ಮತ್ತು ಇಂತಹ ಘೋರ ಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಟ್ಟುಹಿಡಿದರು. ವಿಶ್ವವಿದ್ಯಾಲಯದ ಆವರಣದಲ್ಲಿ ನಮಗೆ ನ್ಯಾಯ ಬೇಕು ಎಂಬ ಘೋಷಣೆಗಳು ಮೊಳಗಿದವು. ಆದರೆ, ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮಾತ್ರ ಈ ವಿಷಯವನ್ನು ಗೌಪ್ಯವಾಗಿಡಲು ಪ್ರಯತ್ನಿಸುತ್ತಿದೆ. ಮಾಧ್ಯಮಗಳಿಗೆ ಮಾಹಿತಿ ಹೊರಹೋಗದಂತೆ ತಡೆಯಲು ವಿಶ್ವವಿದ್ಯಾಲಯದ ಗೇಟ್‌ಗಳನ್ನು ಮುಚ್ಚಲಾಗಿತ್ತು.

ಆದರೆ, ವಿದ್ಯಾರ್ಥಿಗಳು ತಮ್ಮ ಸೆಲ್​ಫೋನ್ ಟಾರ್ಚ್ ಲೈಟ್​ ಬೆಳಗಿಸುತ್ತಾ ನಮಗೆ ನ್ಯಾಯ ಬೇಕು ಎಂಬ ಘೋಷಣೆಗಳನ್ನು ಕೂಗಿದರು. ಇನ್ನು ವಿಡಿಯೋಗಳನ್ನು ಮಾರಾಟ ಮಾಡಿರುವ ಆರೋಪದ ಮೇಲೆ ಬಿಟೆಕ್ ಅಂತಿಮ ವರ್ಷದ ವಿದ್ಯಾರ್ಥಿ ಮೇಲೆ ವಿದ್ಯಾರ್ಥಿನಿಯರು ಹಲ್ಲೆಗೆ ಯತ್ನಿಸಿದರು. ಈ ವಿಷಯ ತಿಳಿದ ಪೊಲೀಸರು ಕಾಲೇಜು ಹಾಸ್ಟೆಲ್‌ಗೆ ಆಗಮಿಸಿ, ಅಂತಿಮ ವರ್ಷದ ವಿದ್ಯಾರ್ಥಿ ವಿಜಯ್​ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ವಿದ್ಯಾರ್ಥಿಯ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ.

ಅಂತಿಮ ವರ್ಷದ ವಿದ್ಯಾರ್ಥಿ ಹಾಗೂ ಮತ್ತೊಬ್ಬ ವಿದ್ಯಾರ್ಥಿ ಮೇಲೆ ಕ್ಯಾಮೆರಾ ಅಳವಡಿಸಿದ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಗಳು 'X' ವೇದಿಕೆಯಲ್ಲಿ ಈ ಘಟನೆಯನ್ನು ಖಂಡಿಸುತ್ತಿದ್ದಾರೆ. ಘಟನೆ ನಡೆದು ಒಂದು ವಾರವಾದರೂ ಇನ್ನು ಏಕೆ ಕ್ರಮ ಕೈಗೊಂಡಿಲ್ಲ ಎಂದು ಕಾಲೇಜು ಆಡಳಿತ ಮಂಡಳಿಯನ್ನು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ. ಇನ್ನು ಘಟನೆ ಬಗ್ಗೆ ವಿವರ ನೀಡಲು ಪೊಲೀಸರು ಕೂಡ ನಿರಾಕರಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. (ಏಜೆನ್ಸೀಸ್​)