ನ್ಯೂಸ್

ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆಪತ್ರಿಕೆ ರಿಲೀಸ್​

Webdesk - Manjunatha B

ಯಾವ ಅಧ್ಯಾಯವನ್ನು ಎಷ್ಟು ಓದಬೇಕು? ಯಾವುದಕ್ಕೆ ಎಷ್ಟು ಅಂಕ ಇರಲಿದೆ? ಎಲ್ಲ ವಿಷಯಗಳ, ಎಲ್ಲ ಪಾಠಗಳನ್ನು ಚಾಚೂತಪ್ಪದೇ ಓದಬೇಕಾ? ಪ್ರಶ್ನೆಪತ್ರಿಕೆ ಹೇಗಿರಲಿದೆ?... ದ್ವಿತೀಯ ಪಿಯು ವಿದ್ಯಾರ್ಥಿಗಳ ಇಂಥ ಗೊಂದಲವನ್ನು ಶಿಕ್ಷಣ ಇಲಾಖೆ ನಿವಾರಿಸಿದೆ. ಮಾದರಿ ಪ್ರಶ್ನೆಪತ್ರಿಕೆ ಮಾತ್ರವಲ್ಲದೆ, ಯಾವ ವಿಷಯದಲ್ಲಿ, ಯಾವ ಅಧ್ಯಾಯಕ್ಕೆ ಎಷ್ಟು ವೇಟೇಜ್ ನೀಡಲಾಗುತ್ತದೆ ಎಂಬುದರ ನೀಲ ನಕ್ಷೆಯನ್ನು ಒದಗಿಸಿದೆ.

ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶವನ್ನು ಈ ಬಾರಿ ಇನ್ನಷ್ಟು ಸುಧಾರಿಸಲು ಹಾಗೂ ಪಠ್ಯಕ್ರಮದ ಹೊರತಾದ ಪ್ರಶ್ನೆಗಳ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಸಜ್ಜಾಗುವ ನೆರವಾಗುವ ನಿಟ್ಟಿನಲ್ಲಿ 2024- 25ನೇ ಸಾಲಿಗೆ ದ್ವಿತೀಯ ಪಿಯು ತರಗತಿಗಳ ಎಲ್ಲ ವಿಷಯಗಳ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡುಗಡೆಗೊಳಿಸಿದೆ. ಪದವಿ ಪೂರ್ವ ಪಠ್ಯಕ್ರಮ ಬೋಧಿಸುವ ಉಪನ್ಯಾಸಕರಿಂದ ಪ್ರಶ್ನೆಪತ್ರಿಕೆಗಳನ್ನು ತಯಾರಿಸಿ ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ. ಮಾದರಿ ಪ್ರಶ್ನೆಪತ್ರಿಕೆಗಳನ್ವಯ ವಿದ್ಯಾರ್ಥಿಗಳನ್ನು ಮುಂಬರುವ ಪರೀಕ್ಷೆಗಳಿಗೆ ಸಜ್ಜುಗೊಳಿಸಿ ಫಲಿತಾಂಶ ಉತ್ತಮಪಡಿಸಲು ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಕಾಲೇಜು ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಿದೆ.

ಪರೀಕ್ಷಾ ಅವಧಿ 3 ತಾಸಿಗೆ ಇಳಿಕೆ: ಈ ಹಿಂದೆ 100 ಅಂಕಗಳ ಪ್ರಶ್ನೆಪತ್ರಿಕೆಗೆ ಉತ್ತರಿಸಲು 3 ಗಂಟೆ 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತಿತ್ತು. ಆದರೆ, ಪ್ರಸ್ತುತ ಗರಿಷ್ಠ 70/80 ಅಂಕದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕಾಗಿರುವುದರಿಂದ ಲಿಖಿತ ಪರೀಕ್ಷಾ ಅವಧಿಯನ್ನು 3 ತಾಸುಗಳಿಗೆ ಸೀಮಿತಗೊಳಿಸಲಾಗಿದೆ. ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷ ಹಾಗೂ ಉತ್ತರ ಬರೆಯಲು 2 ತಾಸು 45 ನಿಮಿಷಗಳನ್ನು ನೀಡಲಾಗುತ್ತಿದೆ ಎಂದು ಮಂಡಳಿ ತಿಳಿಸಿದೆ.

ಎನ್​ಎಸ್​ಕ್ಯೂಎಫ್ ಹಾಗೂ ಹಿಂದುಸ್ಥಾನಿ ಸಂಗೀತ ವಿಷಯದಲ್ಲಿ 60/40 ಅಂಕದ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿರುವುದರಿಂದ ಈ ಹಿಂದಿನಂತೆ 2 ಗಂಟೆ 30 ನಿಮಿಷವನ್ನು ಮುಂದುವರಿಸಲಾಗುತ್ತಿದೆ. ಪರೀಕ್ಷೆಯನ್ನು ಬೆಳಗಿನ ಅವಧಿಯಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಮಧ್ಯಾಹ್ನದ ಅವಧಿಯಲ್ಲಿ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಸಲು ಸೂಚಿಸಲಾಗಿದೆ.

ಶೇ.50 ಆಯ್ಕೆ ಪ್ರಶ್ನೆಗಳು: ಪ್ರತಿ ವಿಷಯದ ಪ್ರಶ್ನೆಪತ್ರಿಕೆಯಲ್ಲಿ ವಿದ್ಯಾರ್ಥಿಗಳು ಉತ್ತರಿಸಬೇಕಾದ ಗರಿಷ್ಠ ಅಂಕಗಳ ಶೇ.50ರಷ್ಟು ಅಂಕಗಳಿಗೆ ಆಯ್ಕೆ ಪ್ರಶ್ನೆಗಳನ್ನು ನೀಡಲಾಗಿದೆ. ಪ್ರಾಯೋಗಿಕ ಪರೀಕ್ಷೆಗಳಿರುವ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ, ಹಾಗೂ ಗೃಹ ವಿಜ್ಞಾನಗಳಂಥ ವಿಷಯಗಳಲ್ಲಿ ಪ್ರಶ್ನೆಪತ್ರಿಕೆಗಳ ಗರಿಷ್ಠ ಅಂಕವು 70 ಆಗಿದೆ. ಈ ವಿಷಯಗಳಲ್ಲಿ ಒಟ್ಟು 105 ಅಂಕಗಳ ಪ್ರಶ್ನೆಗಳನ್ನು ನೀಡಲಾಗಿದೆ. ಹಾಗೆಯೇ, ಎನ್​ಎಸ್​ಕ್ಯೂಎಫ್ ಹಾಗೂ ಹಿಂದುಸ್ಥಾನಿ ಸಂಗೀತ ಹೊರತುಪಡಿಸಿದ ಪ್ರಾಯೋಗಿಕ ಪರೀಕ್ಷೆರಹಿತ ವಿಷಯಗಳಲ್ಲಿ ಗರಿಷ್ಠ ಅಂಕಗಳು 80 ಆಗಿದ್ದು, ಪ್ರಶ್ನೆಪತ್ರಿಕೆಗಳಲ್ಲಿ ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಂತೆ ಒಟ್ಟು 120 ಅಂಕಗಳ ಪ್ರಶ್ನೆಗಳಿರುತ್ತವೆ.

ಪಠ್ಯಕ್ರಮದ ಹೊರತಾದ ಪ್ರಶ್ನೆ ಇಲ್ಲ: ಪಠ್ಯಪುಸ್ತಕದಲ್ಲಿ ಹಾಗೂ ಪ್ರಶ್ನೆಕೋಶದಲ್ಲಿ (ಕ್ವಶ್ಚನ್ ಬ್ಯಾಂಕ್) ಅಧ್ಯಾಯವಾರು ನೀಡಲಾಗಿರುವ ಪ್ರಶ್ನೆಗಳ ಜತೆಗೆ ಹೊಸ ಪ್ರಶ್ನೆಗಳನ್ನು ಕೇಳಲು ಅವಕಾಶವಿದೆ. ಆದರೆ, ಸದರಿ ಪ್ರಶ್ನೆಗಳ ಪರಿಕಲ್ಪನೆ ಪಠ್ಯದಲ್ಲಿರುವಂತೆ ಎಚ್ಚರವಹಿಸಲು ಸ್ಪಷ್ಟ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಪಠ್ಯಕ್ರಮದ ಹೊರತಾದ ಪ್ರಶ್ನೆಗಳನ್ನು ಕೇಳಲು ಅವಕಾಶವಿಲ್ಲವೆಂದು ಎಚ್ಚರಿಕೆ ನೀಡಲಾಗಿದೆ. ಆದರೆ, ಪಠ್ಯದಲ್ಲಿರುವ ಅಕ್ಷರ-ಸಂಖ್ಯಾಯುಕ್ತ ಬೆಲೆಗಳನ್ನು ಬದಲಾಯಿಸಿ ಪ್ರಶ್ನೆಗಳನ್ನು ಕೇಳಬಹುದು ಎಂದು ತಿಳಿಸಲಾಗಿದೆ.

ಸುಲಭ ಮತ್ತು ಕಠಿಣ ಪ್ರಶ್ನೆಗಳ ಅನುಪಾತ: ಪ್ರತಿ ಪ್ರಶ್ನೆಪತ್ರಿಕೆಗಳಲ್ಲಿ ಸುಲಭ (ಗ್ರಹಿಸು, ಸ್ಮರಿಸು, ಅನ್ವಯಿಸು) ವಿಭಾಗದಲ್ಲಿ ಶೇ.70ರಿಂದ ಶೇ.80ರವರೆಗೆ ಪ್ರಶ್ನೆಗಳಿರಲಿವೆ. ಅಂತೆಯೇ, ಶೇ.20ರಿಂದ 30 ಪ್ರಶ್ನೆಗಳು ಕಠಿಣವಾಗಿರಲಿವೆ. ಅಂದರೆ, ವಿಶ್ಲೇಷಣೆ, ಮೌಲ್ಯಮಾಪನ ಹಾಗೂ ಸೃಜನಾತ್ಮಕತೆಯನ್ನು (ಹೈಯರ್ ಆರ್ಡರ್ ಥಿಂಕಿಂಗ್ ಸ್ಕಿಲ್ಸ್- ಹಾಟ್ಸ್) ಬಯಸುತ್ತವೆ. ಪ್ರಶ್ನೆಪತ್ರಿಕೆಗಳ ನೀಲ ನಕ್ಷೆಯಲ್ಲಿ ಪ್ರತಿ ಅಧ್ಯಾಯಕ್ಕೂ ನಿಗದಿಯಾಗಿರುವ ಅಂಕಗಳ ಪ್ರಮಾಣ ನೀಡಲಾಗಿರುವುದರಿಂದ ವಿದ್ಯಾರ್ಥಿ ಆಯಾ ಅಧ್ಯಾಯವನ್ನು ಗಮನಿಸಲು ನೀಡಬೇಕಾದ ಆದ್ಯತೆಯನ್ನು ಸುಲಭವಾಗಿ ಗ್ರಹಿಸಬಹುದು.

ಏಕರೂಪತೆ: ಆಯಾ ವಿಷಯಗಳಿಗೆ ನಿಗದಿಯಾದ ಬೋಧನಾ ಅವಧಿ ಹಾಗೂ ವಿದ್ಯಾರ್ಥಿಗಳ ಅರಿವಿನ ಮಟ್ಟವನ್ನು ಆಧರಿಸಿ ಪ್ರತಿ ವಿಷಯದಲ್ಲೂ ಅಧ್ಯಾಯವಾರು ನಿರ್ದಿಷ್ಟ ಅಂಕಗಳನ್ನು ನಿಗದಿ ಮಾಡಲಾಗಿದೆ. ಈ ಮೂಲಕ ಏಕರೂಪತೆಯನ್ನು ತರಲಾಗಿದೆ ಎಂದು ಮಂಡಳಿ ತಿಳಿಸಿದೆ.

ಪ್ರತ್ಯೇಕ ನೀಲನಕ್ಷೆ: ಪ್ರತಿ ಮಾದರಿ ಪ್ರಶ್ನೆಪತ್ರಿಕೆಯು ಪ್ರತ್ಯೇಕ ನೀಲ ನಕ್ಷೆಯನ್ನು ಹೊಂದಿದೆ. ಅಂತೆಯೇ ಮಂಡಳಿ ನೀಡಿರುವ ನೀಲ ನಕ್ಷೆಯು ಆಯಾ ವಿಷಯಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಒಂದೇ ವಿಷಯದ ಬೇರೆ ಬೇರೆ ಪ್ರಶ್ನೆಪತ್ರಿಕೆಗೂ ಇದು ಭಿನ್ನವಾಗಿರುತ್ತದೆ.