ಬೆಂಗಳೂರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜ.16ರಿಂದ 30ರ ವರೆಗೆ ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಜಿಲ್ಲಾ ಹಂತದಲ್ಲಿ ನಡೆಸುವಂತೆ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಾಂಡಳಿ ಸೂಚನೆ ನೀಡಿದೆ.
ದ್ವಿತೀಯ ಪಿಯುಸಿ ಪರೀಕ್ಷೆಗೆ ಪೂರ್ವಭಾವಿಯಾಗಿ ಜಿಲ್ಲಾ ಹಂತದಲ್ಲಿ ಪ್ರತಿ ವರ್ಷ ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಲಾಗುತ್ತಿದೆ. 2024ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾ.2ರಿಂದ 22ರ ವರೆಗೆ ನಡೆಸಲಾಗುತ್ತಿದೆ. ತಾತ್ಕಾಲಿಕ ವೇಳಾಪಟ್ಟಿಯನ್ನು ಈಗಾಗಲೇ ಮಂಡಳಿ ಪ್ರಕಟಿಸಿದೆ.
ಈ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳ ಉಪ ನಿರ್ದೇಶಕರು ಜಿಲ್ಲಾ ಮಟ್ಟದಲ್ಲಿ ವೇಳಾಪಟ್ಟಿ ಹಾಗೂ ಮಂಡಳಿ ನಿರ್ದೇಶನದಂತೆ ಪ್ರಾಯೋಗಿಕ ಪರೀಕ್ಷೆ ಹೊಂದಿರುವ ವಿಷಯಗಳಲ್ಲಿ 70 ಅಂಕಗಳಿಗೆ ಮತ್ತು ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ 80 ಅಂಕಗಳಿಗೆ ನಡೆಸಬೇಕು. ಮಂಡಳಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿರುವ ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ನೀಲನಕ್ಷೆಗಳ ಆಧಾರದ ಮೇಲೆ ವಿಭಾಗ ಮಟ್ಟದಲ್ಲಿ ಪ್ರಶ್ನೆಪತ್ರಿಕೆ ತಯಾರಿಕಾ ತರಬೇತಿ ಹೊಂದಿದ ಉಪನ್ಯಾಸಕರಿಂದ ಪ್ರಶ್ನೆಪತ್ರಿಕೆ ಸಿದ್ಧಪಡಿಸಬೇಕು. ಯಾವುದೇ ಲೋಪಗಳಿಗೆ ಅವಕಾಶ ನೀಡದಂತೆ ಪರೀಕ್ಷಾ ಗೌಪ್ಯತೆಯನ್ನು ಕಾಪಾಡುವಂತೆ ತಿಳಿಸಿದ್ದಾರೆ.