ನ್ಯೂಸ್

ನಾಳೆಯಿಂದ 23ರವರೆಗೆ ದ್ವಿತೀಯ ಪಿಯು ಪರೀಕ್ಷೆ, 1,016 ಕೇಂದ್ರಗಳಲ್ಲಿ 6.8 ಲಕ್ಷ ವಿದ್ಯಾರ್ಥಿಗಳು | ಶುಭ ಹಾರೈಸಿದ ಸಿಎಂ ಬಿಎಸ್​ವೈ

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆ ಬುಧವಾರ ಆರಂಭವಾಗಲಿದ್ದು, ಈ ಬಾರಿ ಒಟ್ಟು 1,016 ಕೇಂದ್ರಗಳಲ್ಲಿ 6,80,049 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. 2, 16,930 ವಿದ್ಯಾರ್ಥಿಗಳು ವಿಜ್ಞಾನ ವಿಭಾಗ, 2,61,674 ವಾಣಿಜ್ಯ ವಿಭಾಗ ಮತ್ತು 2,01,445 ಕಲಾ ವಿಭಾಗದ ವಿದ್ಯಾರ್ಥಿಗಳಿದ್ದಾರೆ. ಒಟ್ಟಾರೆ ವಿದ್ಯಾರ್ಥಿಗಳಲ್ಲಿ 3,41,618 ಬಾಲಕಿಯರಿದ್ದರೆ, ಬಾಲಕರ ಸಂಖ್ಯೆ 3,38,431 ಎಂದು ಪಿಯು ಇಲಾಖೆ ತಿಳಿಸಿದೆ.

ನಿಯಂತ್ರಣ ಘಟಕ: ಪ್ರತಿ ಜಿಲ್ಲಾ ಕೇಂದ್ರದಲ್ಲಿ ಒಂದು ನಿಯಂತ್ರಣ ಘಟಕ ಆರಂಭಿಸಲಾಗುತ್ತದೆ. ಈ ಸಲದಿಂದ ಕೈಗೊಳ್ಳಲಾಗುತ್ತಿರುವ ವಿಶೇಷ ಕ್ರಮ ಇದಾಗಿದೆ. ಗೌಪ್ಯ ವಸ್ತುಗಳನ್ನು ನಿರ್ವಹಿಸಲು ಇದು ನೆರವಾಗಲಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಘಟಕವಿರಲಿದ್ದು, ಬೆಂಗಳೂರಿನ ಕೇಂದ್ರ ಕಚೇರಿಯೊಂದಿಗೆ ನೇರ ಸಂಪರ್ಕ ಹೊಂದಿರುತ್ತದೆ. ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಿರ್ವಹಿಸಲು ಇದು ನೆರವಾಗಲಿದೆ. ಈವರೆಗೆ ಒಟ್ಟು 35,156 ಮೌಲ್ಯಮಾಪಕರು ಹೆಸರು ನೋಂದಣಿ ಮಾಡಿಕೊಂಡಿದ್ದು, ಸಿಇಟಿ ಫಲಿತಾಂಶ ಪ್ರಕಟಗೊಂಡ ಕೂಡಲೇ ಪಿಯುಸಿ ಫಲಿತಾಂಶ ಹೊರಬೀಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋರಿಕೆ ತಡೆಗೆ ಕ್ರಮ: ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಇಂಥ ಘಟನೆ ನಡೆಯದಂತೆ ತಡೆಗಟ್ಟಲು ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅಕ್ರಮಗಳಲ್ಲಿ ಭಾಗಿಯಾದವರಿಗೆ 5 ಲಕ್ಷ ರೂ. ದಂಡ ಹಾಗೂ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಪರೀಕ್ಷಾ ಕೇಂದ್ರದ ಸುತ್ತಲೂ ಪೊಲೀಸ್ ಬಂದೋಬಸ್ತ್ ಒದಗಿಸಲು ಪೊಲೀಸ್ ಇಲಾಖೆಗೆ ಮನವಿ ಮಾಡಿದೆ. ಉಪನ್ಯಾಸಕರ ಪ್ರತಿಭಟನೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಕಪ್ಪುಪಟ್ಟಿ ಧರಿಸಿ ಪರೀಕ್ಷೆ ನಡೆಸಿಕೊಡಲು ನಿರ್ಧರಿಸಿದೆ. ಈ ಹಿಂದೆ ಪ್ರಥಮ ಪಿಯು ಪರೀಕ್ಷೆಗೆ ಕಪ್ಪುಪಟ್ಟಿ ಧರಿಸಿಕೊಂಡು ಪ್ರತಿಭಟನೆ ಮಾಡಿದ ರೀತಿಯನ್ನೇ ದ್ವಿತೀಯ ಪಿಯು ಪರೀಕ್ಷೆಗೂ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದೆ. ಬೇಡಿಕೆಯನ್ನು ಆಲಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್​ಕುಮಾರ್ ಸೋಮವಾರ ಉಪನ್ಯಾಸಕ ಮತ್ತು ಪ್ರಾಂಶುಪಾಲರ ಸಂಘದೊಂದಿಗೆ ಸಭೆ ನಡೆಸಿದರು. ಆದರೆ, ಈಡೇರಿಕೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕಪ್ಪುಪಟ್ಟಿ ಧರಿಸಿ 4ನೇ ಹಂತದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ತಿಳಿಸಿದ್ದಾರೆ.