Patna: ಮುಂಬರುವ ಬಿಹಾರದ ವಿಧಾನಸಭಾ ಚುನಾವಣೆ( Bihar Election) ಸೀಟು ಹಂಚಿಕೆ ಕುರಿತು ಮಹಾಘಟಬಂಧನ್‌ನಲ್ಲಿ ಬಿಕ್ಕಟ್ಟು ಮುಂದುವರಿದಿದ್ದರೂ, ಕಾಂಗ್ರೆಸ್ ನಾಯಕರು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ರನ್ನು ವಿರೋಧ ಪಕ್ಷದ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೊಷಿಸುವ ಸಾಧ್ಯತೆ ಇದೆ ಎಂದು ಶುಕ್ರವಾರ( ಅ 17) ಹೇಳಿದ್ದಾರೆ.
ಪಾಟ್ನಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ಅಖಿಲೇಶ್ ಪ್ರಸಾದ್ ಸಿಂಗ್, ಸೀಟು ಹಂಚಿಕೆ ಕುರಿತು ಚರ್ಚೆಗಳು ಇನ್ನೂ ನಡೆಯುತ್ತಿದ್ದು, ಬಿಜೆಪಿ-ಜೆಡಿಯು ಒಕ್ಕೂಟದ ವಿರುದ್ಧ ಒಗ್ಗಟ್ಟು ಪ್ರದರ್ಶೀಸಲು ತನ್ನ ಬತ್ತಳಿಕೆಯನ್ನು ಬಲಪಡಿಸಿಕೊಳ್ಳುವತ್ತ ಮೈತ್ರಿಕೂಟ ಗಮನಹರಿಸಿದೆ. ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಅವರೇ ಆಯ್ಕೆಯಾಗುವ ಸಾಧ್ಯತೆ ಇದ್ದು, ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಸಿಂಗ್ ಹೇಳಿದರು.
ಮುಖ್ಯಮಂತ್ರಿ ಅಭ್ಯರ್ಥಿಯ ಕುರಿತಾಗಿ ಎಲ್ಲಾ ಮೈತ್ರಿಕೂಟಗಳು ಆದಷ್ಟು ಶೀಘ್ರ ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದು, ಬಿಹಾರದಲ್ಲಿ ಮಹಾಘಟಬಂಧನ್ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಅವರನ್ನು ಘೋಷಿಸಬೇಕೇ ಎಂಬ ಪ್ರಶ್ನೆಗೆ ಕಟಿಹಾರ್‌ನ ಸಂಸದ ತಾರಿಕ್ ಅನ್ವರ್, ಅದನ್ನು ಮಾಡುವುದರಿಂದ ಯಾವುದೇ ಹಾನಿ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಹಾಘಟಬಂಧನ್ ಮತ್ತು ಎನ್‌ಡಿಎ ಎರಡೂ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ತಕ್ಷಣ ಘೋಷಿಸಬೇಕು ಎಂದು ಒತ್ತಾಯಿಸಿದ್ದು, ಎನ್‌ಡಿಎ ಮತ್ತು ನಮ್ಮ ಮೈತ್ರಿಕೂಟ ಎರಡೂ ಮುಖ್ಯಮಂತ್ರಿ ಅಭ್ಯರ್ಥಿಯ ವಿಷಯದಲ್ಲಿ ತಮ್ಮ ಆಯ್ಕೆಗಳನ್ನು ಜನತೆಯ ಮುಂದಿಡಬೇಕು ಎಂದರು. ವಿರೋಧ ಪಕ್ಷದ ನಾಯಕರು ತೇಜಶ್ವಿಗೆ ಬೆಂಬಲ ಸೂಚಿಸುತ್ತಿದ್ದರೆ, ಬಿಹಾರ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ತಮ್ಮ ಮೈತ್ರಿಕೂಟದ ಮುಖವಾಗಿ ಉಳಿಯುತ್ತಾರೆ ಎಂದು ಎನ್‌ಡಿಎ ಪುನರುಚ್ಚರಿಸಿದೆ.
ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸುಳಿವು ಸಿಕ್ಕಿದ್ದರೂ, ಮಹಾಘಟಬಂಧನ್ ಸೀಟು ಹಂಚಿಕೆಗೆ ಸಂಬಂಧಿಸಿದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಇನ್ನೂ ಪರಿಹರಿಸಿಲ್ಲ. ಕಾಂಗ್ರೆಸ್ ಗುರುವಾರ ತಡವಾಗಿ 48 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತು, ಆದರೆ ಮೈತ್ರಿ ಪಾಲುದಾರರಲ್ಲಿ ಭಿನ್ನಾಭಿಪ್ರಾಯಗಳು ಮುಂದುವರೆದಿವೆ. ವಿಕಾಸಶೀಲ್ ಇನ್ಸಾನ್ ಪಕ್ಷದ (ವಿಐಪಿ) ಮುಖ್ಯಸ್ಥ ಮುಖೇಶ್ ಸಹನ್ ಅವರು ಪ್ರಸ್ತಾವಿತ ಸೂತ್ರದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಆಡಳಿತಾರೂಢ ಎನ್‌ಡಿಎ ಈಗಾಗಲೇ ತನ್ನ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ: ಬಿಜೆಪಿ ಮತ್ತು ಜೆಡಿ(ಯು) ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಇತರ ಮಿತ್ರಪಕ್ಷಗಳಿಗೆ ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ, ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಆವಾಮ್ ಮೋರ್ಚಾ (ಜಾತ್ಯತೀತ) ಮತ್ತು ರಾಜ್ಯಸಭಾ ಸಂಸದ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ತಲಾ ಆರು ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಗೆ 29 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.
ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಬಿಹಾರ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ.(ಏಜೆನ್ಸೀಸ್)