ನ್ಯೂಸ್

ಐಆರ್​​ಸಿಟಿಸಿ ಪ್ರಾರಂಭಿಸಿದ ಹೊಸ ರೈಲು ಕಾಶಿ ಮಹಾಕಾಲ್​ ಎಕ್ಸ್​ಪ್ರೆಸ್​ನ ಸೀಟ್​ ನಂಬರ್​ 64ರಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವಂತಿಲ್ಲ...

ವಾರಾಣಸಿ: ಫೆ.16ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡ ಕಾಶಿ ಮಹಾಕಾಲ್​ ಎಕ್ಸ್​ಪ್ರೆಸ್​ ರೈಲಿನಲ್ಲಿ ಒಂದು ಸೀಟಿನಲ್ಲಿ ಯಾರೂ ಕುಳಿತುಕೊಳ್ಳುವಂತಿಲ್ಲ. ಇದು ರೈಲ್ವೆ ಅಧಿಕಾರಿಗಳದ್ದೇ ನಿರ್ಧಾರ.

ನಿನ್ನೆ ಚಾಲನೆ ಪಡೆದುಕೊಂಡಿರುವ ಕಾಶಿ ಮಹಾಕಾಲ್​ ಎಕ್ಸ್​ಪ್ರೆಸ್​ನ ಬಿ5 ಕೋಚ್​ನ 64ನೇ ನಂಬರ್​ನ ಸೀಟು ಯಾವುದೇ ಪ್ರಯಾಣಿಕರಿಗೂ ಲಭ್ಯ ಇರುವುದಿಲ್ಲ. ಈ ಆಸನವನ್ನು ಕಾಶಿಯ ದೇವರು ಶಿವನಿಗೇ ಮೀಸಲಿಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಅಷ್ಟೇ ಅಲ್ಲ ಸೀಟಿನ ಮೇಲೆ ಒಂದು ಸಣ್ಣ ಶಿವನ ದೇವಸ್ಥಾನವನ್ನೇ ನಿರ್ಮಿಸಿದ್ದಾರೆ. ಈ ಮೂಲಕ ದೇವಾಲಯವನ್ನು ಹೊಂದಿದ ಮೊದಲ ರೈಲು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಈ ರೈಲು ವಾರಾಣಸಿ ಮತ್ತು ಇಂಧೋರ್​ ನಡುವೆ ಲಖನೌ ಮೂಲಕ 1131 ಕಿಮೀ ದೂರ ಹಾಗೂ ಪ್ರಯಾಗ್​ ರಾಜ್​ ಮೂಲಕ 1102 ಕಿಮೀ ಸಂಚಾರ ಮಾಡಲಿದೆ.

ಎರಡು ಖಾಸಗಿ ತೇಜಸ್ ರೈಲುಗಳನ್ನು ಪ್ರಾರಂಭ ಮಾಡಿದ್ದ ಭಾರತೀಯ ರೈಲ್ವೆ ಇಲಾಖೆ (ಐಆರ್ ಸಿಟಿಸಿ) ಇದೀಗ ಕಾಶಿ ಮಹಾಕಾಲ್​ ಎಂಬ ಹೊಸ ಖಾಸಗಿ ರೈಲು ಸಂಚಾರವನ್ನು ಆರಂಭ ಮಾಡಿದೆ. ಈ ರೈಲು ಸಂಚಾರ ಫೆಬ್ರವರಿ 20ರಿಂದ ಶುರುವಾಗಲಿದ್ದು ಜ್ಯೋತಿರ್ಲಿಂಗ -ಓಂಕಾರೇಶ್ವರ, ಮಹಾಕಾಲೇಶ್ವರ, ಕಾಶಿ ವಿಶ್ವನಾಥದಂತಹ ಪುಣ್ಯಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಕಾಶಿ ಮಹಾಕಾಲ್​ ಎಕ್ಸ್​ಪ್ರೆಸ್​ ಟ್ರೇನ್​ ವಾರದಲ್ಲಿ ಮೂರು ದಿನ ಸಂಚಾರ ಮಾಡಲಿದೆ. (ಏಜೆನ್ಸೀಸ್​)