ನ್ಯೂಸ್

ಬ್ಯಾಂಕ್ ಲಾಕರ್‌ಗಳಲ್ಲಿ ಶೋಧ

ಮಂಜುನಾಥ.ಕೆ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಶುಕ್ರವಾರ ೧೨ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ೬೦ ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು, ಶುಕ್ರವಾರ ಬ್ಯಾಂಕ್ ಲಾಕರ್‌ಗಳಲ್ಲಿ ಶೋಧ ನಡೆಸಿದರು.
ದಾಳಿಗೊಳಗಾದ ಅಧಿಕಾರಿಗಳಲ್ಲಿ ಕೆಲವರು ಬ್ಯಾಂಕ್ ಲಾಕರ್‌ಗಳಲ್ಲಿ ಆಸ್ತಿ ಪತ್ರ ಮತ್ತು ನಗದು, ಚಿನ್ನಾಭರಣವನ್ನು ಇಟ್ಟಿರುವುದು ಪತ್ತೆಯಾಗಿತ್ತು. ಹೀಗಾಗಿ ಆರೋಪಿಗಳಿಗೆ ಸಂಬಂಧಿಸಿದ ಬ್ಯಾಂಕ್‌ಗಳಿಗೆ ಕರೆದೊಯ್ದು ಪರಿಶೀಲನೆ ನಡೆಸಿದ್ದು, ಅದರಲ್ಲಿದ್ದ ಆಸ್ತಿ ಪತ್ರ, ಚಿನ್ನಾಭರಣ ಮತ್ತು ನಗದನ್ನು ಜಪ್ತಿ ಮಾಡಿದ್ದಾರೆ. ಕೆಲವು ಅಧಿಕಾರಿಗಳು ಲಾಕರ್‌ಗಳ ಕೀ ನೀಡಲು ಸತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಕೀ ಮೇಕರ್ಸ್‌ಗಳನ್ನು ಕರೆಯಿಸಿ ಲಾಕರ್‌ಗಳನ್ನು ತೆಗೆಸಿ ಪರಿಶೀಲನೆ ನಡೆಸಿದರು.
ಶನಿವಾರ ರಾತ್ರಿ ವೇಳೆಗೆ ದಾಳಿ ಮುಕ್ತಾಯಗೊಳಿಸಿದ್ದು, ಆರೋಪಿತರ ಬಳಿ ಪತ್ತೆಯಾಗಿರುವ ಮಹತ್ತರ ದಾಖಲೆಗಳನ್ನು ವಶಕ್ಕೆ ಪಡೆದು ಕೊಂಡೊಯ್ದಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಸರ್ಕಾರಿ ಅಧಿಕಾರಿಗಳಿಗೆ ಸದ್ಯದಲ್ಲಿಯೇ ನೋಟಿಸ್ ನೀಡಿ ವಿಚಾರಣೆ ಕರೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.