ನ್ಯೂಸ್

ಜಿಲ್ಲಾಧಿಕಾರಿಗಳಿಗೆ ಎಸ್‌ಡಿಆರ್‌ಎಫ್ ಅನುದಾನ ಬಿಡುಗಡೆ | Be ready to tackle situation

ಮೃತ್ಯುಂಜಯ ಕಪಗಲ್

ಬೆಂಗಳೂರು: ಪ್ರಕೃತಿ ವಿಕೋಪಗಳಿಂದ ಉಂಟಾಗುವ ಹಾನಿಗಳಿಗೆ ತಕ್ಷಣ ಸ್ಪಂದಿಸಿ, ಪರಿಹಾರ ಪಾವತಿಸಲು ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್)ಯಿಂದ ಜಿಲ್ಲಾಧಿಕಾರಿಗಳ ಖಾತೆಗೆ ಒಟ್ಟು 524.80 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಮುಂಬರುವ ದಿನಗಳಲ್ಲಿ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಮೂಲಸವಲತ್ತುಗಳು ಹಾಗೂ ಬೆಳೆ ಹಾನಿಗೆಗೆ ನಿಯಮಾನುಸಾರ ಪರಿಹಾರ ಪಾವತಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಡಿಸಿಗಳು ಕೋರಿದ್ದರು.

ರಾಯಚೂರು, ಬೀದರ್, ಧಾರವಾಡ, ಶಿವಮೊಗ್ಗ, ಮೈಸೂರು ಹಾಗೂ ಹಾಸನ ಜಿಲ್ಲಾಧಿಕಾರಿಗಳು ಪತ್ರ ಬರೆದು ಅನುದಾನ ಕೋರಿದ್ದರು. ಈ ಹಿನ್ನೆಲೆಯಲ್ಲಿ 31 ಜಿಲ್ಲಾಧಿಕಾರಿಗಳಿಗೆ ಷರತ್ತುಬದ್ಧವಾಗಿ ಒಟ್ಟು 524.80 ಕೋಟಿ ರೂ. ಬಿಡುಗಡೆಯಾಗಿದೆ.

ಕೇಂದ್ರದ ಪಾಲು

ಕೇಂದ್ರ ಸರ್ಕಾರವು 15ನೇ ಹಣಕಾಸು ಆಯೋಗದ ಶಿಾರಸಿನಂತೆ 2024-25ನೇ ಸಾಲಿನಲ್ಲಿ ರಾಜ್ಯ ವಿಪತ್ತು ಪರಿಹಾರ ನಿಧಿಗೆ ಎರಡನೇ ಕಂತಿನ ಅನುದಾನ 366 ಕೋಟಿ ರೂ. ಬಿಡುಗಡೆ ಮಾಡಿದ್ದು, ಆರ್ಥಿಕ ಇಲಾಖೆಯು ಎರಡನೇ ಕಂತಿನ ರಾಜ್ಯದ ಪಾಲು 122 ಕೋಟಿ ರೂ. ಬಿಡುಗಡೆ ಮಾಡಿದೆ.

ಅಲ್ಲದೆ, ಸನ್ನದ್ಧತೆ ಮತ್ತು ಸಾಮರ್ಥ್ಯಾಭಿವೃದ್ದಿ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕರಿಗೆ 25 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ, ಸಂಭಾವ್ಯ ಪ್ರಕೃತಿ ವಿಪತ್ತು ಎದುರಿಸಲು ಸನ್ನದ್ಧರಾಗಿರುವಂತೆ ಕಂದಾಯ ಇಲಾಖೆ ಉಪ ಕಾರ್ಯದರ್ಶಿ ಎಸ್.ಆರ್.ಶಿವಶಂಕರ್ (ವಿಪತ್ತು ನಿರ್ವಹಣೆ ಹಾಗೂ ನೋಂದಣಿ ಮತ್ತು ಮುದ್ರಾಂಕ) ಶುಕ್ರವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ಅನ್ಯ ಕೆಲಸಗಳಿಗೆ ಬಳಸುವಂತಿಲ್ಲ

ಆಯಾ ಜಿಲ್ಲಾಧಿಕಾರಿಗಳ ಪಿಡಿ ಖಾತೆಗಳಿಗೆ ಜಮೆಯಾದ ಎಸ್‌ಡಿಆರ್‌ಎ್ ಅನುದಾನವನ್ನು ಅನ್ಯ ಕೆಲಸಗಳಿಗೆ ಬಳಸಬಾರದು ಎಂದು ಇಲಾಖೆ ಸೂಚಿಸಿದೆ. ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ 301.80 ಕೋಟಿ ರೂ., ಪುನರುಜ್ಜೀವನ ಮತ್ತು ಪುನರ್ ನಿರ್ಮಾಣ ಕಾರ್ಯಗಳಿಗೆ 223 ಕೋಟಿ ರೂ. ಸೇರಿ 524.80 ಕೋಟಿ ರೂ. ಬಿಡುಗಡೆಯಾಗಿದೆ.

ಎಸ್‌ಡಿಆರ್‌ಎ್ ನೆರವನ್ನು ನಿಯಮಾನುಸಾರ ಉದ್ದೇಶಿಸಿತ ಕೆಲಸಗಳಿಗೆ ಬಳಕೆಯ ನಂತರ ಉಪಯೋಗಿತಾ ಪ್ರಮಾಣಪತ್ರದ ಜಿಲ್ಲಾಧಿಕಾರಿ ಮೇಲು ರುಜುವಿನೊಂದಿಗೆ ಕೆಎಸ್‌ಎನ್‌ಡಿಎಂಸಿ ನಿರ್ದೇಶಕರಿಗೆ ಕಳುಹಿಸಬೇಕು. ಅನುದಾನ ಬಳಕೆಯಲ್ಲಿ ಯಾವುದೇ ಲೋಪದೋಷಗಳು ಕಂಡು ಬಂದಲ್ಲಿ ನೇರವಾಗಿ ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಹಾಗೂ ಜಿಲ್ಲಾಧಿಕಾರಿಗಳನ್ನೇ ಹೊಣೆ ಮಾಡಲಾಗುವುದು.

ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಮಾರ್ಗಸೂಚಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಲ ಕಾಲಕ್ಕೆ ಹೊರಡಿಸುವ ಆದೇಶ, ಸುತ್ತೋಲೆಗಳನ್ನು ಪಾಲಿಸುವುದ ಸೇರಿ ಐದು ಷರತ್ತುಗಳನ್ನು ವಿಧಿಸಿ ಇಲಾಖೆ ಆದೇಶಿಸಿದೆ.