ವೀರಾಪುರ ಹಿರೇಮಠದಲ್ಲಿ ಆಯೋಜಿಸಿದ್ದ ಧರ್ಮಸಭೆಯನ್ನು ಶ್ರೀಶೈಲ ಜಗದ್ಗುರುಗಳು ಉದ್ಘಾಟಿಸಿದರು. ಮರುಳಸಿದ್ಧ ಪಂಡಿತಾರಾಧ್ಯ ಶ್ರೀಗಳು ಇದ್ದರು (ಎಡಚಿತ್ರ). ವೀರಾಪುರ ಹಿರೇಮಠದಲ್ಲಿ ಲಿಂ. ಶ್ರೀ ಚನ್ನವೀರ ದೇಶೀಕೇಂದ್ರ ಶಿವಾಚಾರ್ಯರ ನಿರ್ವಿಕಲ್ಪ ಸಮಾಧಿಯ ಶಿಲಾಮಂಟಪ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬಿ.ವೈ.ರಾಘವೇಂದ್ರ, ಲಕ್ಷ್ಮಣ ಸವದಿ, ರುದ್ರಪ್ಪ ಲಮಾಣಿ, ಸಿ.ಸಿ.ಪಾಟಿಲ್, ಗದ್ದಿಗೌಡರ್, ಮಹಿಮ ಪಟೇಲ್ ಇತರರಿದ್ದರು (ಬಲಚಿತ್ರ). 
ನ್ಯೂಸ್

ದೇಗುಲಗಳಿಂದ ಶಿಲ್ಪಕಲೆ ಜೀವಂತ

ಶಿಲಾಮಂಟಪ ಲೋಕಾರ್ಪಣೆ ಸಮಾರಂಭ

ತ್ಯಾಗರ್ತಿ: ದೇವಾಲಯಗಳು ಭಕ್ತರ ಅನುಗ್ರಹಕ್ಕೆ ಮಾತ್ರವಲ್ಲ, ಧಾರ್ಮಿಕ ಪರಂಪರೆಯ ಸಂಕೇತ. ಜಾನಪದ, ಶಿಲ್ಪಕಲೆಯನ್ನು ಉಳಿಸಿದ ಕೀರ್ತಿ ದೇವಸ್ಥಾನಗಳಿಗೆ ಸಲ್ಲುತ್ತದೆ ಎಂದು ಶ್ರೀಶೈಲ ಜಗದ್ಗುರು ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಭಗವತ್ಪಾದರು ಹೇಳಿದರು.

ವೀರಾಪುರ ಹಿರೇಮಠದಲ್ಲಿ ಬುಧವಾರ ಲಿಂ. ಶ್ರೀ ಚನ್ನವೀರ ದೇಶೀಕೇಂದ್ರ ಶಿವಾಚಾರ್ಯರ ನಿರ್ವಿಕಲ್ಪ ಸಮಾಧಿಯ ನೂತನ ಶಿಲಾಮಂಟಪ ಲೋಕಾರ್ಪಣೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ವೀರಾಪುರ ಶ್ರೀಗಳು ಆಧ್ಯಾತ್ಮಿಕ ಚಿಂತನೆಗಳ ಮೂಲಕ ಸಮಾಜಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಶಿಲ್ಪಕಲೆಯನ್ನು ಉಳಿಸಿ ಸುಂದರವಾದ ಮಂದಿರ ನಿರ್ಮಿಸಿದ್ದಾರೆ. ಹಸುವಿನ ದೇಹದೆಲ್ಲೆಡೆ ಹಾಲು ಇದ್ದರೂ ಅದು ಸಿಗುವುದು ಕೆಚ್ಚಲಿನಲ್ಲಿ ಮಾತ್ರ. ಹಾಗೆಯೇ ದೇವರು ಎಲ್ಲೇ ಇದ್ದರೂ ಅವನು ಪ್ರಕಟವಾಗುವುದು ದೇವಸ್ಥಾನಗಳಲ್ಲಿ ಮಾತ್ರ ಎಂದರು.

ದೇವಸ್ಥಾನವೆಂದರೆ ಸ್ಥಾವರ, ಜಂಗಮವೆಂದರೆ ಚೈತನ್ಯವೆಂದು ಯಾರೂ ವಿಶ್ಲೇಷಿಸಿಲ್ಲ. ಪ್ರಪಂಚದಲ್ಲಿ ಜಡ ಎನ್ನುವ ವಸ್ತುವೇ ಇಲ್ಲ. ಚೈತನ್ಯ ಯಾವಾಗಲೂ ನಿಗೂಢವಾಗಿರುತ್ತದೆ. ಅಂಥದನ್ನು ನಾವು ಜಡೆವೆಂದು ಭಾವಿಸುತ್ತೇವೆ. ವೈಜ್ಞಾನಿಕ ಆವಿಷ್ಕಾರಗಳೂ ಕೂಡ ಪ್ರತಿಯೊಂದರಲ್ಲಿಯೂ ಚೈತನ್ಯವಿದೆ ಎಂದು ತೋರಿಸಿಕೊಟ್ಟಿದೆ. ಇನ್ನು ನಾವು ಗುರುತಿಸಬೇಕು. ಪುರಾತನ ದೇವಸ್ಥಾನಗಳು ನಮ್ಮ ನೆಲಮೂಲ ಕಲೆಗಳನ್ನು ಜೀವಂತವಾಗಿರಿಸಿವೆ ಎಂದು ತಿಳಿಸಿದರು.

ಎಲ್ಲ ಮಠಗಳಿಗೆ ಗದ್ದುಗೆಯೇ ದೊಡ್ಡ ಸಂಪತ್ತು. ಗದ್ದುಗೆಯಲ್ಲಿ ಏನಿರುತ್ತದೆ ಎಂದು ಉಡಾಫೆ ಮಾಡಬಾರದು. ಗದ್ದುಗೆ ಒಳಗಿರುವ ಚೈತನ್ಯವು ಸಮುದಾಯದ ಮೂಲಕ ಎಲ್ಲವನ್ನೂ ಮಾಡಿಸುತ್ತದೆ. ಈ ಮಠದಲ್ಲಿ ಮರುಳಸಿದ್ಧ ಪಂಡಿತಾರಾಧ್ಯ ಶ್ರೀಗಳು ತಾವು ಪಟ್ಟಕ್ಕೆ ಬಂದ ನಂತರ ಮಠವನ್ನು ಇನ್ನಿಲ್ಲದಂತೆ ಅಭಿವೃದ್ಧಿ ಮಾಡಿದ್ದಾರೆ. ಮಠಕ್ಕೆ ಕಲಶಪ್ರಾಯದಂತೆ ಶಿಲಾ ಮಂಟಪವನ್ನು ಶಾಸ್ತ್ರಬದ್ಧ, ವೈಜ್ಞಾನಿಕ ತಳಹದಿ ಮೇಲೆ ನಿರ್ಮಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಸಂಸ್ಕಾರದಿಂದ ನೀರು ತೀರ್ಥವಾದಂತೆ, ಅನ್ನ ಪ್ರಸಾದವಾದಂತೆ, ಸಗಣಿ ವಿಭೂತಿಯಾದಂತೆ ಮಠಮಾನ್ಯಗಳು, ದೇವಸ್ಥಾನಗಳ ಸಂಪರ್ಕದಿಂದ ಮನುಷ್ಯನಿಗೆ ಸಂಸ್ಕಾರ ದೊರೆಯುತ್ತದೆ. ಯಾವುದೇ ಪ್ರಚಾರ ಬಯಸದ ವೀರಾಪುರ ಶ್ರೀಗಳು ಜನರಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ವೀರಾಪುರ ಶ್ರೀಗಳು ಧಾರ್ಮಿಕ ಪರಂಪರೆಯ ಪುನರುತ್ಥಾನ ಮಾಡಿದ್ದಾರೆ. ಯುವ ಪೀಳಿಗೆಗೆ ಸಂಸ್ಕಾರ ಸಂಸ್ಕೃತಿಯನ್ನು ದಾಟಿಸುವ ಕೆಲಸ ಮಾಡುತ್ತಿದ್ದಾರೆ. ಮಠಮಂದಿರಗಳು ನಮ್ಮಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ರಾಜ್ಯದ ವಿವಿಧೆಡೆಯಿಂದ 30ಕ್ಕೂ ಹೆಚ್ಚಿನ ಮಠಾಧೀಶರು, ಸಹಕಾರ ಸಚಿವ ಲಕ್ಷ್ಮಣ ಸವದಿ, ಜವಳಿ ಸಚಿವ ರುದ್ರಪ್ಪ ಲಮಾಣಿ, ಮಾಜಿ ಸಚಿವ ಸಿ.ಸಿ.ಪಾಟಿಲ್, ಬಾಗಲಕೋಟೆ ಸಂಸದ ಗದ್ದಿಗೌಡರ್, ತರೀಕೆರೆ ಶಾಸಕ ಶ್ರೀನಿವಾಸ, ಕೊಡುಗು ವಿವಿ ಕುಲಪತಿ ಅಶೋಕ್ ಆರೂರು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಮಹಿಮ ಪಟೇಲ್, ಯು.ಬಿ.ಬಣಕಾರ್, ನಾಡಗೌಡ, ಸಂಸ್ಕೃತ ಪಂಡಿತ ಜಿ.ಕೆ.ಹೆಗಡೆ ಇತರರಿದ್ದರು.