ನ್ಯೂಸ್

ಮಕ್ಕಳ ಬುದ್ಧಿ ಕಸಿದುಕೊಳ್ಳುವ ಸ್ಕ್ರೀನ್​ಟೈಂ

ನಮ್ಮ ಮಕ್ಕಳು ಎಲ್ಲಾ ಮಕ್ಕಳಿಗಿಂತ ಚುರುಕಾಗಿರಬೇಕು, ಬುದ್ಧಿವಂತರಾಗಬೇಕು,ಫಸ್ಟ್ ರ್ಯಾಂಕ್ ಬರಬೇಕು ಎಂದು ಬಹುತೇಕ ಪಾಲಕರು ಇಚ್ಛಿಸುತ್ತಾರೆ. ಮಗುವಿನಲ್ಲಿ ಸಹಜವಾಗಿ ಚುರುಕುತನ ಇದ್ದೇ ಇರುತ್ತದೆ. ಆದರೆ ಮಕ್ಕಳಲ್ಲಿ ಸ್ಕ್ರೀನ್ ಟೈಂ ಹೆಚ್ಚುತ್ತಿದ್ದು, ಮಾನಸಿಕ ಮತ್ತು ಶಾರೀರಿಕವಾಗಿ ಅವರು ಕುಗ್ಗುತ್ತಿದ್ದಾರೆ. ಹಾಗಿದ್ದರೆ ಏನಿದು ಸ್ಕ್ರೀನ್ ಟೈಂ? ಇದರಿಂದ ಸಮಸ್ಯೆಗಳೇನು? ಇಲ್ಲಿದೆ ವಿವರ.

ವಿಶ್ವ ಆರೋಗ್ಯ ಸಂಸ್ಥೆಯು (ಗಏಣ) ಈಚೆಗೆ ಸಿಂಗಾಪುರದಲ್ಲಿ ಒಂದು ಪ್ರಯೋಗ ಕೈಗೊಂಡಿತ್ತು. 500 ಮಕ್ಕಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರೆಲ್ಲರೂ ಎರಡರಿಂದ ಮೂರು ವರ್ಷಗಳ ಪುಟಾಣಿಗಳು. ಅವರ ಪೈಕಿ ಕೆಲವು ಪುಟಾಣಿಗಳು ಮೂರು ಗಂಟೆ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಮೊಬೈಲ್, ಟಿ.ವಿ ನೋಡುತ್ತ ಕಳೆದವರು. ಇನ್ನು ಕೆಲವರು ಒಂದು ಗಂಟೆಗಿಂತಲೂ ಕಡಿಮೆ ಅವಧಿಯವರೆಗೆ ಇವುಗಳನ್ನು ವೀಕ್ಷಿಸಿದವರು. ಇನ್ನು ಕೆಲವು ಮಕ್ಕಳನ್ನು ಇವುಗಳಿಂದ ದೂರ ಇಡಲಾಗಿತ್ತು.

ಸತತ ಮೂರು ವರ್ಷ ಇದೇ ಮಕ್ಕಳ ಮೇಲೆ ಅಧ್ಯಯನ ಮುಂದುವರೆಯಿತು. ಅಂದರೆ ಈ ಎಲ್ಲಾ ಮಕ್ಕಳು ಐದರಿಂದ ಐದೂವರೆ ವರ್ಷ ದೊಡ್ಡವರಾದರು. ಆಮೇಲೆ ಅವರ ಬುದ್ಧಿವಂತಿಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ, ಹೆಚ್ಚು ಸಮಯ ಸ್ಕ್ರೀನ್ ಮುಂದೆ ಇದ್ದ ಮಕ್ಕಳು ಮಂದ ಬುದ್ಧಿಯವರಾಗಿದ್ದರೆ, ಒಂದು ಗಂಟೆಗಿಂತ ಕಡಿಮೆ ಅವಧಿಯವರೆಗೆ ವೀಕ್ಷಣೆ ಮಾಡಿದ ಮಕ್ಕಳು ಸಾಧಾರಣ ಬುದ್ಧಿವಂತರೂ, ಸ್ಕ್ರೀನ್ ವೀಕ್ಷಿಸದೇ ಇದ್ದ ಪುಟಾಣಿಗಳು ಅತಿ ಬುದ್ಧಿವಂತರಾಗಿ ಬೆಳೆದಿದ್ದರು. ಇಷ್ಟೇ ಆದರೆ ಪರವಾಗಿರಲಿಲ್ಲ. ಈ ಮೂರು ವರ್ಷಗಳಲ್ಲಿನ ಮಕ್ಕಳ ಆರೋಗ್ಯ ಸ್ಥಿತಿಯನ್ನೂ ಪರೀಕ್ಷಿಸಿದ ತಜ್ಞರು ಬೆರಗಾಗಿದ್ದರು. ಏಕೆಂದರೆ ಹೆಚ್ಚು ಸಮಯ ಸ್ಕ್ರೀನ್ ವೀಕ್ಷಣೆ ಮಾಡಿದ ಮಕ್ಕಳು ಮೇಲಿಂದ ಮೇಲೆ ಅನಾರೋಗ್ಯಪೀಡಿತರಾಗುತ್ತಿದ್ದರೆ, ಚಿಕ್ಕ ವಯಸ್ಸಿನಲ್ಲಿಯೇ ಹಲವು ಮಕ್ಕಳಿಗೆ ಬೊಜ್ಜು ಕೂಡ ಬೆಳೆದಿತ್ತು. ಮೊಬೈಲ್, ಟಿ.ವಿ ವೀಕ್ಷಣೆ ಮಾಡದ ಮಕ್ಕಳು ಆರೋಗ್ಯವಂತರಾಗಿ ಚುರುಕಾಗಿದ್ದರು. ಪ್ರೖೆಮರಿ ಹಾಗೂ ಹೈಸ್ಕೂಲ್ ಮಕ್ಕಳ ಮೇಲೆಯೂ ಪ್ರಯೋಗ ನಡೆಸಲಾಯಿತು. ಚಿಕ್ಕಂದಿನಿಂದ ಅತಿ ಹೆಚ್ಚು ಮೊಬೈಲ್, ಲ್ಯಾಪ್​ಟಾಪ್ ಹಾಗೂ ಟಿ.ವಿಯ ಮುಂದೆ ಕಳೆಯುತ್ತಿದ್ದ ಮಕ್ಕಳಲ್ಲಿ ಖಿನ್ನತೆ ಕಂಡು ಬಂತು. ಕೆಲವು ಮಕ್ಕಳು ಇಂಟರ್​ನೆಟ್​ನಲ್ಲಿ ಹೊಸ ಹೊಸ ವಿಷಯಗಳನ್ನು ಕಲಿತರೂ ಅವರು ಇತರ ಮಕ್ಕಳ ಜತೆ ಬೆರೆಯುತ್ತಿರಲಿಲ್ಲ, ಸ್ಟೇಜ್ ಫಿಯರ್, ಎಕ್ಸಾಂ ಫಿಯರ್ ಅನೇಕ ಮಕ್ಕಳಲ್ಲಿ ಕಾಣಿಸಿಕೊಂಡಿತು. ಅಷ್ಟೇ ಅಲ್ಲದೇ ಸ್ಕ್ರೀನ್​ಗೆ ದಾಸರಾದ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಸರಿಯಾಗಿ ನಿದ್ದೆಯನ್ನೂ ಮಾಡದೇ ಸದಾ ಅನಾರೋಗ್ಯಪೀಡಿತರಂತೆ ವರ್ತಿಸುತ್ತಿದ್ದುದು ಬೆಳಕಿಗೆ ಬಂತು.

ಈ ಕುರಿತ ವರದಿಯನ್ನು ಲ್ಯಾನ್​ಸೆಟ್ ಚೈಲ್ಡ್ ಆಂಡ್ ಅಡೋಲೆಸೆಂಟ್ ಹೆಲ್ತ್ ಜರ್ನಲ್​ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ. ಬೇರೆಲ್ಲಾ ಯೋಚನೆ ಬಿಟ್ಟು ಸ್ಕ್ರೀನ್ ಮುಂದೆ ಹೆಚ್ಚು ಹೆಚ್ಚು ಇರುವ ಮಕ್ಕಳು ಆತ್ಮಹತ್ಯೆಗೆ ಶರಣಾಗುವಂಥ ಗಂಭೀರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದಿದೆ ಈ ವರದಿ.

ಇವೆಲ್ಲವೂ ಅಧ್ಯಯನಗಳ ವರದಿಯಾಯ್ತು. ಆದರೆ ನಿಮ್ಮಲ್ಲಿ ಹಲವರು ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿರಲಿಕ್ಕೆ ಸಾಕಲ್ಲವೆ? ಆ ಬದಲಾವಣೆ ಪೈಕಿ ಹೆಚ್ಚಿನವುಗಳಿಗೆ ಕಾರಣ, ಸ್ಕ್ರೀನ್​ಟೈಂ ಹೆಚ್ಚುತ್ತಿರುವುದು. ಅತಿ ಹೆಚ್ಚು ಸ್ಕ್ರೀನ್ ಟೈಂನಲ್ಲಿ ಕಳೆಯುವ ಮಕ್ಕಳ ಬುದ್ಧಿಮತ್ತೆಯ ಪ್ರಮಾಣ ಕಡಿಮೆ ಆಗುತ್ತಾ ಬಂದಿರುವುದನ್ನು ಹಲವಾರು ಪಾಲಕರು ಗಮನಿಸಿದರೂ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಕ್ಕಿಲ್ಲ. ಆದರೆ ಮಕ್ಕಳ ಭವಿಷ್ಯದ ಮೇಲೆ ನಿಗಾ ವಹಿಸುವುದು ಪಾಲಕರ ಅದರಲ್ಲೂ ಮುಖ್ಯವಾಗಿ ಮಕ್ಕಳ ಸಮೀಪವೇ ಹೆಚ್ಚಿಗೆ ಇರುವ ಅಮ್ಮಂದಿರ ಜವಾಬ್ದಾರಿ ಅಲ್ಲವೆ?

ಏನಿದು ಸ್ಕ್ರೀನ್ ಟೈಂ?

ಕೆಲ ವರ್ಷಗಳ ಹಿಂದೆ ಟಿ.ವಿ ನೋಡುವುದಷ್ಟೇ ಸ್ಕ್ರೀನ್ ಟೈಂ ಎನ್ನಲಾಗುತ್ತಿತ್ತು. ಆದರೆ ಅತ್ಯಂತ ಕಡಿಮೆ ದರದಲ್ಲಿ ಯಾವಾಗ ಇಂಟರ್​ನೆಟ್ ಸಿಗಲು ಶುರುವಾದವೋ ಅಲ್ಲಿಂದ ಸ್ಕ್ರೀನ್ ಟೈಂ ವ್ಯಾಪ್ತಿ ಹೆಚ್ಚಾಗತೊಡಗಿದೆ. ಸ್ಮಾರ್ಟ್ ಫೋನ್, ಲ್ಯಾಪ್​ಟಾಪ್, ಟ್ಯಾಬ್ಲೆಟ್ ಸೇರಿದಂತೆ ಇಂಟರ್​ನೆಟ್ ಬಳಕೆ ಮಾಡಿ ಪರದೆ (ಸ್ಕ್ರೀನ್) ನೋಡಲು ಬಳಸುವ ಎಲ್ಲಾ ಉಪಕರಣಗಳಲ್ಲಿ ಒಟ್ಟಾರೆಯಾಗಿ ವ್ಯಯಿಸುವ ವೇಳೆಯನ್ನು ‘ಸ್ಕ್ರೀನ್ ಟೈಂ’ ಎನ್ನಲಾಗುತ್ತದೆ.

ಮಗುವನ್ನು ಹೊಗಳಿದ್ದು ಸಾಕು...

ಮಾತು ಕೂಡ ಆಡಲು ಬಾರದ ಪಾಪು, ಸ್ಮಾರ್ಟ್​ಫೋನ್ ಹಿಡಿದುಕೊಂಡು ತನ್ನದೇ ಭಾಷೆಯಿಂದ ಮಾತನಾಡಲು ಶುರು ಮಾಡಿದರೆ ಆಹಾ! ಅಪ್ಪ-ಅಮ್ಮನಿಗೆ ಖುಷಿಯೋ ಖುಷಿ. ‘ನಮ್ಮನೆ ಪುಟ್ಟ/ಪುಟ್ಟಿ ಹೇಗೆ ಮಾತಾಡ್ತದೆ ಗೊತ್ತಾ? ಆ ಕಡೆ ಅಜ್ಜ-ಅಜ್ಜಿ ಧ್ವನಿ ಕೇಳಿದರಂತೂ ಏನೇನೋ ಮಾತನಾಡುತ್ತೆ’ಎಂದು ಪಾಪುವನ್ನು ಹೊಗಳಿ ಮುಗಿಯುವುದೇ ಇಲ್ಲ. ಇನ್ನು ಮಗು ಸ್ಮಾರ್ಟ್​ಫೋನ್ ಹಿಡಿದುಕೊಂಡು ಅದರಲ್ಲಿ ಏನೇನೋ ಬಟನ್ ಒತ್ತುತ್ತ ಖುಷಿಪಡುತ್ತಿದ್ದರಂತೂ ಅದರ ಗುಣಗಾನ ಶುರುವಾಗಿಬಿಡುತ್ತದೆ. ಆದರೆ ನಿಮಗೆ ಗೊತ್ತೆ? ‘ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್’ ನಡೆಸಿರುವ ಅಧ್ಯಯನದ ಪ್ರಕಾರ 18 ತಿಂಗಳು ತುಂಬದ ಮಗುವಿನ ಕೈಗೆ ಸ್ಮಾರ್ಟ್​ಫೋನ್ ಕೊಡುವುದು ಅತ್ಯಂತ ಅಪಾಯಕಾರಿ. ಮಗುವಿನ ಮೆದುಳು ಇನ್ನೂ ಬೆಳವಣಿಗೆಯ ಹಂತದಲ್ಲಿರುತ್ತದೆ. ಸ್ಮಾರ್ಟ್ ಪೋನ್​ಗಳು ಹೊರಸೂಸುವ ನೀಲಿಬೆಳಕು ಅವರ ಜೈವಿಕ ಗಡಿಯಾರವನ್ನು ತೊಂದರೆಗೀಡುಮಾಡುತ್ತದೆ. ಮಕ್ಕಳ ಕಣ್ಣಿನ ದೊಡ್ಡ ಪಾಪೆಗಳು ಬಹುಬೇಗ ಬೆಳಕಿನ ಕುಕ್ಕುವಿಕೆಯಿಂದ ಹಾನಿಗೊಳಗಾಗುತ್ತವೆ. ನಿದ್ದೆಯನ್ನು ನಿಯಂತ್ರಿಸುವ ಹಾಮೋನ್​ನಾದ ‘ಮೆಲಟೋನಿನ್’ ಮೇಲೆ ದುಷ್ಪರಿಣಾಮ ಉಂಟಾಗುತ್ತ ಕ್ರಮೇಣ ಮಗುವಿನ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಜತೆಗೆ, ಪೋನ್ ಹಿಡಿದಾಗ ತನ್ನನ್ನು ಹೊಗಳುತ್ತಿದ್ದುದನ್ನು ತಿಳಿಯುವ ಮಗುವಿಗೆ ಅದರ ಮೇಲೆ ಇನ್ನಷ್ಟು ಆಸಕ್ತಿ ಉಂಟಾಗುತ್ತದೆ. ಪುಟಾಣಿಯಿದ್ದಾಗ ಹೊಗಳುವ ಅಪ್ಪ-ಅಮ್ಮ ಮಗು ದೊಡ್ಡವರಾಗುತ್ತಿದ್ದಂತೆ ಬೈಯಲು ಶುರು ಮಾಡಿದಾಗ ಆ ಮಗುವಿಗೆ ಏಕೆ ಹೀಗೆ ಎಂದು ತಿಳಿಯದೇ ಮಾನಸಿಕವಾಗಿ ಕುಗ್ಗುವುದೂ ಉಂಟು ಎಂದು ತಜ್ಞರು ತಿಳಿಸಿದ್ದಾರೆ.

ಸ್ಕ್ರೀನ್ ಟೈಂ ಹೇಗಿರಬೇಕು?

ಮಕ್ಕಳ ಮೇಲೆ ಅಧ್ಯಯನ ಕೈಗೊಂಡಿರುವ ತಜ್ಞರು ಹೇಳುವುದು ಹೀಗೆ:

ಆಹಾರ ಸೇವನೆ ಸಯಮದಲ್ಲಿ ಕಡ್ಡಾಯವಾಗಿ ಮೊಬೈಲ್, ಟಿ.ವಿ. ಬಳಕೆ ನಿಷಿದ್ಧ.

ಮಲಗುವ ಸಮಯದಲ್ಲಿ ಸಾಧ್ಯವಾದಷ್ಟು ಇವೆಲ್ಲವನ್ನೂ ಮಕ್ಕಳಿಂದ ದೂರವಿಡಿ.

2ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಕೈಗೆ ಆಗಾಗ್ಗೆ ಫೋನ್ ಕೊಡುತ್ತಿದ್ದರೆ, ಟಿವಿಯನ್ನು ನೋಡಲು ಬಿಟ್ಟರೆ ಭವಿಷ್ಯದಲ್ಲಿ ಮಗುವಿನ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನುವುದು ನೆನಪಿಡಿ.

2ರಿಂದ 6 ವಯಸ್ಸಿನ ಮಕ್ಕಳನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇಡುವುದು ಕಷ್ಟ. ಆದ್ದರಿಂದ ಅವರ ಒಟ್ಟಾರೆ ಸ್ಕ್ರೀನ್ ಟೈಂ ಅನ್ನು (ಎಲ್ಲ ಸ್ಕ್ರೀನ್​ಗಳನ್ನು ಒಟ್ಟಿಗೆ ಸೇರಿಸಿ) ಒಂದು ಗಂಟೆಗೆ ಕಡ್ಡಾಯವಾಗಿ ಸೀಮಿತಗೊಳಿಸಿ.

6 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಮಕ್ಕಳ ಸ್ಕ್ರೀನ್ ಟೈಂ 2 ಗಂಟೆಗೆ ಸೀಮಿತಗೊಳಿಸಿ.

ಇವೆಲ್ಲಾ ಸಾಧ್ಯವಾಗುವುದು ಮೊದಲು ಪಾಲಕರಾದ ನೀವು ನಿಮ್ಮನ್ನು ಸರಿಯಾಗಿ ಇಟ್ಟುಕೊಂಡರೆ ಮಾತ್ರ. ದಿನವಿಡೀ ಸ್ಮಾರ್ಟ್​ಫೋನ್ ಹಿಡಿದು ಕುಳಿತು, ಧಾರಾವಾಹಿಗಳನ್ನು ನೋಡಲು ಟಿ.ವಿ.ಮುಂದೆ ಅಲ್ಲಾಡದೆ ಕುಳಿತುಕೊಂಡು ಮಕ್ಕಳಿಗೆ ಬೈದರೆ ಯಾವ ಪ್ರಯೋಜನವೂ ಇಲ್ಲ. ಶಾಲೆ, ಹೋಂವರ್ಕ್, ಆ ಕ್ಲಾಸ್, ಈ ಕ್ಲಾಸ್ ಎಂದೆಲ್ಲಾ ದಿನಪೂರ್ತಿ ಓಡಾಡುವ ಮಕ್ಕಳಿಗೆ ಸಿಗುವ ಅಲ್ಪ ಸಮಯವನ್ನು ಪಾಲಕರು ಮಕ್ಕಳಿಗಾಗಿ ಮೀಸಲಿಟ್ಟರೆ (ಆಟವಾಡುವುದು, ಕಥೆ ಹೇಳುವುದು ಇತ್ಯಾದಿ) ತುಂಬಾ ಒಳ್ಳೆಯದು. ಹೊರಗಡೆ ಆಟವಾಡಲು ಅವಕಾಶವಿದ್ದರೆ ಖಂಡಿತ ಮಕ್ಕಳನ್ನು ಒಳಗೆ ಕಟ್ಟಿಹಾಕಬೇಡಿ, ಹೊರಗಡೆ ಆಡುವ ಮಕ್ಕಳಿಗೆ ಯಾವುದೇ ‘ಸ್ಕ್ರೀನ್’ ಅವಶ್ಯಕತೆ ಬೀಳುವುದಿಲ್ಲ.