ಸೋಮವಾರಪೇಟೆ ಶಂಕಪ್ಪ ಹಾಲ್‌ನಲ್ಲಿ ಆಯೋಜಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸೋಮವಾರಪೇಟೆ ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಎಸ್.ಡಿ.ವಿಜೇತ ಉದ್ಘಾಟಿಸಿದರು. ಬೇಬಿ ಮ್ಯಾಥ್ಯು, ರಮೇಶ್, ಜಿಮ್ಮಿ ಸಿಕ್ವೇರಾ, ರಾಣಿ ಇದ್ದರು. 
ನ್ಯೂಸ್

ಸ್ಕೌಟ್ಸ್-ಗೈಡ್ಸ್ ಯುವ ಜನಾಂಗದ ಶಿಸ್ತುಬದ್ಧ ಕೂಟ

ಸೋಮವಾರಪೇಟೆ : ಸ್ಕೌಟ್ಸ್ ಮತ್ತು ಗೈಡ್ಸ್ ಯುವ ಜನಾಂಗದ ಒಂದು ಶಿಸ್ತುಬದ್ಧ ಕೂಟ. ಯುವ ಪೀಳಿಗೆಯ ದೈಹಿಕ, ಮಾನಸಿಕ ಬೆಳವಣಿಗೆ ಈ ಚಳವಳಿಯ ಉದ್ದೇಶ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೊಡಗು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಹೇಳಿದರು.

ಪಟ್ಟಣ ಶಂಕಪ್ಪ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಸೋಮವಾರಪೇಟೆ ಸ್ಥಳೀಯ ಸ್ಥಳೀಯ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರುವುದು ಮತ್ತು ಜೀವನ ಮೌಲ್ಯಗಳನ್ನು ಕಲಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವವರನ್ನು ಸಮಾಜ ಸೇವಕರೆಂದೇ ಗುರುತಿಸಲಾಗಿದೆ ಎಂದು ಹೇಳಿದರು.

1907ರಲ್ಲಿ ರಾಬರ್ಟ್ ಬೇಡನ್ ಪೋವೆಲ್ ಎಂಬ ಸೈನ್ಯಾಧಿಕಾರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ 20 ಮಕ್ಕಳೊಂದಿಗೆ ಚಳವಳಿ ಪ್ರಾರಂಭಿಸಿದರು. ಇಂದು ವಿಶ್ವವ್ಯಾಪಿಯಾಗಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದರು.

ಹುಡುಗರಿಗೆ ಸ್ಕೌಟ್ಸ್ ಮತ್ತು ಬಾಲಕಿಯರಿಗೆ ಗೈಡ್ಸ್ ಎಂದು ಹೇಳಲಾಗುತ್ತದೆ. ಸಂಸ್ಥೆಯ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು. ನಂಬಿಕೆಗೆ ಅರ್ಹರಾಗಿಬೇಕು. ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಸೋದರ-ಸೋದರಿ ಭಾವನೆಯಿಂದ ಇರಬೇಕು. ಪ್ರಾಣಿ ಮತ್ತು ಪ್ರಕೃತಿ ಪ್ರೇಮಿಯಾಗಿರಬೇಕು. ಶಿಸ್ತು ಪಾಲಿಸಸೇಕು. ಸಾರ್ವಜನಿಕ ಆಸ್ತಿ ಕಾಪಾಡಬೇಕು, ವಿನಯಶೀಲರಾಗಿರಬೇಕು ಎಂದು ಹೇಳಿದರು.

ನೂತನ ಅಧ್ಯಕ್ಷರಾಗಿ ಎಸ್.ಡಿ.ವಿಜೇತ್, ಕಾರ್ಯದರ್ಶಿಯಾಗಿ ಜ್ಯೋತಿ ಅರುಣ್, ಖಜಾಂಚಿಯಾಗಿ ಕೆ.ಪಿ.ದಿನೇಶ್, ಉಪಾಧ್ಯಕ್ಷರಾಗಿ ಶೀಲಾ ಡಿಸೋಜ, ಎ.ಪಿ.ವೀರರಾಜು, ಜೇಸಿ ಶೇಖರ್, ಎಸ್.ಎಂ.ಡಿಸಿಲ್ವಾ, ಜೋಕಿಂವಾಸ್, ವಸಂತಿ ರವೀಂದ್ರ ಮತ್ತು ಪದಾಧಿಕಾರಿಗಳಿಗೆ ಸಂಸ್ಥೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಬಿ.ಎ.ಭಾಸ್ಕರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಜಿಲ್ಲಾ ಸ್ಕೌಟ್ಸ್ ಕಮಿಷನರ್ ಜಿಮ್ಮಿ ಸಿಕ್ವೇರಾ, ಜಿಲ್ಲಾ ಗೈಡ್ ಆಯುಕ್ತರಾದ ಪದ್ಮಶ್ರೀ ರಾಣಿ ಮಾಚಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತಿ, ಜಿಲ್ಲಾ ಸ್ಥಾನಿಕ ಆಯುಕ್ತ ಎಚ್.ಆರ್.ಮುತ್ತಪ್ಪ, ಜಿಲ್ಲಾ ಖಜಾಂಚಿ ಟಿ.ಎಂ.ಮುದ್ದಯ್ಯ, ಜಿಲ್ಲಾ ಪ್ರಧಾನ ಆಯುಕ್ತ ಕೆ.ಯು.ರಂಜಿತ್, ಜಿಲ್ಲಾ ಗೈಡ್ಸ್ ತರಬೇತಿ ಆಯುಕ್ತೆ ಮೈಥಿಲಿರಾವ್, ಜಿಲ್ಲಾ ಸಹಾಯಕ ಗೈಡ್ ಸುಲೋಚನಾ, ಜಿಲ್ಲಾ ಸಂಘಟಕರಾದ ಯು.ಸಿ.ದಮಯಂತಿ ಇದ್ದರು.