ಸ್ಕಾರ್ಪಿಯೋ ಕಾರಿನಲ್ಲಿ ಅಪಾಯಕಾರಿ ಸ್ಟಂಟ್  
ನ್ಯೂಸ್

ದಸರಾ ಮೇಳದಲ್ಲಿ ಸ್ಕಾರ್ಪಿಯೋ ಅಟ್ಟಹಾಸ; ಜನರ ಮೇಲೆ ಕಾರು ಹರಿಸಿದ ಚಾಲಕ | Scorpio Stunt

ಉತ್ತರ ಪ್ರದೇಶದಲ್ಲಿ ದಸರಾ ಮೇಳದ ವೇಳೆ ಜನಸಂದಣಿಯ ನಡುವೆ ಸ್ಕಾರ್ಪಿಯೋ ಕಾರಿನಲ್ಲಿ ಚಾಲಕ ಅಪಾಯಕಾರಿ ಸ್ಟಂಟ್ ಮಾಡಿದ್ದಾನೆ. ಇದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಜನರು ಭಯಭೀತರಾಗಿ ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ.

UP Dasara Fair Accident: ಉತ್ತರ ಪ್ರದೇಶದಲ್ಲಿ ದಸರಾ ಹಬ್ಬದ ಅಂಗವಾಗಿ ನಡೆದ ಮೇಳದಲ್ಲಿ ಜನಸಂದಣಿಯ ನಡುವೆ ಸ್ಕಾರ್ಪಿಯೋ ಕಾರಿನಲ್ಲಿ ಚಾಲಕ ಅಪಾಯಕಾರಿ ಸ್ಟಂಟ್ ಮಾಡಿದ್ದಾನೆ. ಜನನಿಬಿಡ ರಸ್ತೆಯಲ್ಲೇ ಕಾರನ್ನು ವೇಗವಾಗಿ ವೃತ್ತಾಕಾರದಲ್ಲಿ ತಿರುಗಿಸಿ ಡ್ರಿಫ್ಟಿಂಗ್ ಮಾಡಿದ್ದರಿಂದ ಹಲವರು ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಉತ್ತರ ಪ್ರದೇಶದ ಸಲೇಂಪುರ ನಗರದ ಹರೈಯಾ ಲಾಲಾ ಓವರ್‌ಬ್ರಿಡ್ಜ್‌ ಬಳಿ ದಸರಾ ಮತ್ತು ದುರ್ಗಾ ಪೂಜೆಯ ಅಂಗವಾಗಿ ಮೇಳ ಆಯೋಜಿಸಲಾಗಿತ್ತು. ತೇರು ಹಾಗೂ ಮೇಳ ವೀಕ್ಷಿಸಲು ಸಾವಿರಾರು ಜನರು ಸೇರಿದ್ದ ವೇಳೆ, ಬಿಳಿ ಬಣ್ಣದ ಮಹೀಂದ್ರಾ ಸ್ಕಾರ್ಪಿಯೋ ಕಾರಿನ ಚಾಲಕ ಜನರ ನಡುವೆಯೇ ಅಪಾಯಕಾರಿ ರೀತಿಯಲ್ಲಿ ಕಾರು ಚಲಾಯಿಸಿದ್ದಾನೆ. ಇದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಜನರು ಆತಂಕಗೊಂಡು ಪ್ರಾಣಭಯದಿಂದ ಓಡಿದ್ದಾರೆ.

ವೈರಲ್ ವಿಡಿಯೋ ಬೆನ್ನಲ್ಲೇ ಪೊಲೀಸರಿಂದ ಕ್ರಮ

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ದೇವರಿಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಜೀತ್ ಆರ್. ಶಂಕರ್ ಅವರು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅವರ ಸೂಚನೆಯ ಮೇರೆಗೆ ಸಲೇಂಪುರ ಕೊತ್ವಾಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ವೀರೇಂದ್ರ ಪ್ರಜಾಪತಿ ನೀಡಿದ ದೂರಿನ ಆಧಾರದ ಮೇಲೆ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಡಿಯೋ ಮತ್ತು ಸಿಸಿಟಿವಿ ದೃಶ್ಯಗಳ ಸಹಾಯದಿಂದ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರನ್ನು ಗುರುತಿಸಿರುವ ಪೊಲೀಸರು, ಚಾಲಕ ಹಾಗೂ ಆತನ ಜೊತೆಗಿದ್ದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಹಬ್ಬದ ಸಂಭ್ರಮದ ನಡುವೆ ಬೇಜವಾಬ್ದಾರಿ ವರ್ತನೆ

ದಸರಾ ಮತ್ತು ದುರ್ಗಾ ಪೂಜೆಯ ಮೇಳದಲ್ಲಿ ಸಾವಿರಾರು ಜನರು ಸೇರಿದ್ದ ವೇಳೆ ಈ ರೀತಿ ಅಪಾಯಕಾರಿ ಸ್ಟಂಟ್ ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಜನರ ಸುರಕ್ಷತೆಯನ್ನು ಲೆಕ್ಕಿಸದೆ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.