ಬೆಂಗಳೂರು: (Heatwave alert for the coastal region) ಪ್ರಸಕ್ತ ತಿಂಗಳಲ್ಲಿ ವಾಡಿಕೆಯಂತೆ ಚಳಿಗಾಲ ಶುರುವಾಗಬೇಕಿತ್ತು. ಆದರೆ, ‘ಸೂಪರ್ ಎಲ್ನಿನೋ ಪರಿಣಾಮದಿಂದ ಮಳೆಗಾಲದಲ್ಲಿ ಇದ್ದಂತಹ ಬಿಸಿಲು ವಾತಾವರಣ, ಚಳಿಗಾಲದಲ್ಲೂ ಮುಂದುವರಿದಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಖರತೆ ಇನ್ನಷ್ಟು ಏರಿಕೆಯಾಗಿ ದಾಖಲೆ ಮಟ್ಟದ ಉಷ್ಣಾಂಶ ಕಂಡುಬರುತ್ತಿದೆ. ಕರಾವಳಿ ಭಾಗದಲ್ಲಿ ಉಷ್ಣಾಂಶ ಅಧಿಕವಾಗಿರುವ ಹಿನ್ನೆಲೆಯಲ್ಲಿ ಉಷ್ಣ ಅಲೆ(ಹೀಟ್ವೇವ್) ಎಚ್ಚರಿಕೆ ನೀಡಲಾಗಿದೆ. ಇದರ ನಡುವೆಯೂ ರಾಜ್ಯದ ಅಲ್ಲಲ್ಲಿ ಮುಂದಿನ 5 ದಿನ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆ.ದಕ್ಷಿಣ ಮತ್ತು ತುಮಕೂರಿನಲ್ಲಿ ಅ.16ರಂದು ಜೋರು ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಅ.17ರಿಂದ ಅ.19ರವರೆಗೆ ಯೆಲ್ಲೋ ಅಲರ್ಟ್ ಇರಲಿದೆ. ಚಾಮರಾಜನಗರದಲ್ಲಿ ಅ.16ರಿಂದ ಮುಂದಿನ 2 ದಿನ, ದಾವಣಗೆರೆ, ಬೆಳಗಾವಿ, ಧಾರವಾಡ ಮತ್ತು ಗದಗದಲ್ಲಿ ಅ.18ರಿಂದ ಮುಂದಿನ 2 ದಿನ ಬಿರುಸಾಗಿ ಮಳೆಯಾಗುವ ಸಂಭವ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಮಕ್ಕಳಲ್ಲಿ ನಿರ್ಜಲೀಕರಣ ಸಮಸ್ಯೆ:
ಕರಾವಳಿ ಮತ್ತು ಉತ್ತರ ಕರ್ನಾಟಕ ವ್ಯಾಪ್ತಿಯ ಪ್ರದೇಶಗಳಲ್ಲಿ ಕೆಂಡದಂತಹ ವಾತಾವರಣ ಉಂಟಾಗಿದೆ. ರಾಜ್ಯದ ಇತರ ಭಾಗಗಳಕ್ಕಿಂತ ಉತ್ತರ ಕನ್ನಡದ ಹೊನ್ನಾವರದಲ್ಲಿ ಅತಿ ಹೆಚ್ಚು ಅಂದರೆ 38.1 ಡಿ.ಸೆ. ಉಷ್ಣಾಂಶ ಬುಧವಾರ ದಾಖಲಾಗಿದ್ದು, ಇದು ವಾಡಿಕೆಕ್ಕಿಂತ ಬರೋಬ್ಬರಿ 6.7 ಡಿ.ಸೆ.ಅಧಿಕವಾಗಿದೆ. ಕಾರವಾರ, ಮಂಗಳೂರಿನಲ್ಲಿ ವಾಡಿಕೆಕ್ಕಿಂತ 5 ಡಿ.ಸೆ. ಹೆಚ್ಚಳವಾದರೆ, ಬೆಳಗಾವಿ, ಧಾರವಾಡ, ಗದಗ, ವಿಜಯಪುರ, ಬೀದರ್, ಕೊಪ್ಪಳ, ರಾಯಚೂರು ಸೇರಿ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಕ್ಕಿಂತ 4 ಡಿ.ಸೆ. ಅಧಿಕವಾಗಿದೆ. ಉರಿ ಬಿಸಿಲು ಹೆಚ್ಚಳದಿಂದ ಮಕ್ಕಳಲ್ಲಿ ನಿರ್ಜಲೀಕರಣ, ರಕ್ತಹೀನತೆ, ಶೀತ ಮತ್ತು ಬಿಳಿರಕ್ತಕಣಗಳು ಕಡಿಮೆಯಾಗುವಂತಹ ಸಮಸ್ಯೆಗಳು ಕಂಡುಬರುತ್ತಿವೆ. ಹಾಗಾಗಿ, ಈ ಬಗ್ಗೆ ಎಚ್ಚರವಹಿಸುವಂತೆ ಸಲಹೆ ಕೊಟ್ಟಿರುವ ವೈದ್ಯರು, ದೇಹದಲ್ಲಿ ನೀರಿನಾಂಶ ಕಾಪಾಡಿಕೊಳ್ಳುವಂತೆ ಸೂಚಿಸಿದ್ದಾರೆ.
ಬೆಂಗಳೂರಿನಲ್ಲೂ ಅಧಿಕ:
ರಾಜಧಾನಿ ಬೆಂಗಳೂರಿನಲ್ಲೂ ವಾಡಿಕೆಕ್ಕಿಂತ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ. ಗರಿಷ್ಠ ತಾಪಮಾನದಲ್ಲಿ ವಾಡಿಕೆಯಂತೆ 28ರ ಅಸುಪಾಸಿನಲ್ಲಿ ಉಷ್ಣಾಂಶ ವರದಿಯಾಗಬೇಕಿತ್ತು. ಆದರೆ, 31.3 ಡಿ.ಸೆ. ದಾಖಲಾಗಿದ್ದು, ವಾಡಿಕೆಕ್ಕಿಂತ 3.3 ಡಿ.ಸೆ.ಅಧಿಕವಾಗಿದೆ. ಚಿತ್ರದುರ್ಗ, ಶಿವಮೊಗ್ಗ, ಮಂಡ್ಯ ಮತ್ತು ಮೈಸೂರು ಸೇರಿ ದಕ್ಷಿಣ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ವಾಡಿಕೆಕ್ಕಿಂತ ಸರಾಸರಿ 2 ಡಿ.ಸೆ.ಅಧಿಕವಾಗಿದೆ.
ರಾಜ್ಯದಲ್ಲಿ ಗುರುವಾರ ನೈಋತ್ಯ ಮಾನ್ಸೂನ್ ನಿರ್ಗಮನವಾಗಲಿದೆ. 16ರಿಂದ ಈಶಾನ್ಯ ಮಾನ್ಸೂನ್ ಶುರುವಾಗಲಿದ್ದು, ಈ ಹಿನ್ನೆಲೆಯಲ್ಲಿ ಕೆಲ ಭಾಗಗಳಲ್ಲಿ ಮಳೆ ಇರಲಿದೆ. ಮಳೆ ಮತ್ತು ಬಿಸಿಲಿನ ಮಿಶ್ರಣ ವಾತಾವರಣ ರಾಜ್ಯದಲ್ಲಿ ಕಂಡುಬರುತ್ತಿದೆ.
ಡಾ.ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ.