ನ್ಯೂಸ್

ಭತ್ತದ ಬೆಳೆ ಪರಿಶೀಲಿಸಿದ ವಿಜ್ಞಾನಿಗಳು

ಲಲಾಟಾಕ್ಷ ಎಸ್

ಹುಣಸೂರು: ತಾಲೂಕಿನಲ್ಲಿ ಭತ್ತಕ್ಕೆ ಬೆಂಕಿರೋಗ ಮತ್ತು ತಂತಿಹುಳು ರೋಗಬಾಧೆ ತಗುಲಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ತಂಡ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.


ಮಂಡ್ಯದ ವಿಸಿ ಫಾರಂ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ತಾಲೂಕಿನ ಗಾವಡಗೆರೆ, ಬಿಳಿಕೆರೆ ಮುಂತಾದ ಹೋಬಳಿ ವ್ಯಾಪ್ತಿಯ ಜಮೀನುಗಳಿಗೆ ಭೇಟಿ ಪರಿಶೀಲಿಸಿತು. ಈ ವೇಳೆ ಅಧಿಕಾರಿಗಳು ರೈತರೊಂದಿಗೆ ಚರ್ಚಿಸಿ ಬೆಳೆ ಉಳಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.


ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಈರಣ್ಣ ಮಾತನಾಡಿ, ರೈತರು ಪೊಟ್ಯಾಷಿಯಂ ಗೊಬ್ಬರವನ್ನು ಭತ್ತ ನಾಟಿ ಮಾಡುವ ಸಂದರ್ಭದಲ್ಲಿ ಬಳಕೆ ಮಾಡದಿರುವುದರಿಂದ ರೋಗ ಹಾಗೂ ಕೀಟ ನಿರೋಧಕ ಶಕ್ತಿ ಕುಂಠಿತವಾಗಿ ರೋಗ ನಿಯಂತ್ರಣ ಕಷ್ಟ ಸಾಧ್ಯವಾಗುತ್ತಿದೆ. ನಾಟಿಗೆ ಮುನ್ನ 20:20:00:13 ಗೊಬ್ಬರ ಬಳಸಿ ಭತ್ತ ಬೆಳೆದಿರುವ ರೈತರು ಎಕರೆಗೆ 25 ಕೆಜಿ ಎಂಒಪಿ(ಮ್ಯೂರೇಟ್ ಆಫ್ ಪೊಟ್ಯಾಷ್) ಗೊಬ್ಬರವನ್ನು ಸೇರಿಸಬೇಕು.

15ಲೀ. ನೀರಿಗೆ 250 ಗ್ರಾಂ ನೀರಿನಲ್ಲಿ ಕರಗುವ 19:19:19 ಗೊಬ್ಬರವನ್ನು ಸೇರಿಸಿ ಒಂದು ಎಕರೆಗೆ 10 ಕ್ಯಾನ್ ದ್ರಾವಣ ಸಿಂಪಡಣೆ ಮಾಡಬೇಕು. ಇದರಿಂದ ಸಸ್ಯ ವೇಗವಾಗಿ ಪೋಷಕಾಂಶಗಳನ್ನು ಹೀರಿಕೊಂಡು ರೋಗ ತಡೆಯುವ ಶಕ್ತಿ ಹೊಂದುತ್ತದೆ. ನಂತರ ಕಾರ್ಬನ್ಡೈಜಿಮ್ ಶಿಲೀಂಧ್ರ ನಾಶಕವನ್ನು ಪ್ರತಿ 15 ಲೀಟರ್ ನೀರಿನ ಕ್ಯಾನಿಗೆ 22ಗ್ರಾಂ ಬೆರೆಸಿ ಸಿಂಪಡಿಸಿದರೆ ಬೆಂಕಿರೋಗ ತಡೆಗಟ್ಟಬಹುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಮಾಹಿತಿ ಪಡೆಯಬಹುದು ಎಂದರು.


ಗಾವಡಗೆರೆ ಹೋಬಳಿ ಕೃಷಿ ಅಧಿಕಾರಿ ಶ್ರೀಕಾಂತ್, ವಿಜ್ಞಾನಿಗಳು, ರೈತರು ಹಾಜರಿದ್ದರು.