ನವದೆಹಲಿ: ಜಗತ್ತಿನಾದ್ಯಂತ ಇನ್ನೂ ಸಂಪೂರ್ಣವಾಗಿ ಸದ್ದಡಗದ ಕರೊನಾ ಕುರಿತು ಇದೀಗ ಆತಂಕಕಾರಿ ಮಾಹಿತಿಯೊಂದು ಹೊರಹೊಮ್ಮಿದೆ. ಅದರಲ್ಲೂ ಕರೊನಾದ ಮೂಲ ಎನ್ನಲಾದ ಚೀನಾದ ವುಹಾನ್ನಲ್ಲಿ ಪ್ರಯೋಗಾಲಯದ ವಿಜ್ಞಾನಿಯಿಂದಲೇ ಇಂಥದ್ದೊಂದು ಮಾಹಿತಿ ಬಹಿರಂಗಗೊಂಡಿದೆ.
ಚೀನಾದ ವುಹಾನ್ನಲ್ಲಿನ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ್ದ ಯುಎಸ್ ಮೂಲದ ವಿಜ್ಞಾನಿ ಆ್ಯಂಡ್ಯೂ ಹಫ್, ಕರೊನಾ ವೈರಸ್ ಮಾನವನಿರ್ಮಿತ ಹಾಗೂ ಅದು ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಡಬ್ಲ್ಯುಐವಿ) ಕೇಂದ್ರದಿಂದಲೇ ಹೊರಹೊಮ್ಮಿದ್ದು ಎಂದು ಹೇಳಿದ್ದಾರೆ. 'ದ ಟ್ರುಥ್ ಎಬೌಟ್ ವುಹಾನ್' ಎಂಬ ಅವರ ಇತ್ತೀಚಿನ ಪುಸ್ತಕದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಚೀನಾದಲ್ಲಿನ ಕರೊನಾ ವೈರಸ್ಗೆ ಯುಎಸ್ ಸರ್ಕಾರ ಫಂಡ್ ಮಾಡಿತ್ತು.
ಸಾಂಕ್ರಾಮಿಕ ರೋಗಗಳನ್ನು ಅಧ್ಯಯನ ಮಾಡುವ ನ್ಯೂಯಾರ್ಕ್ನ ನಾನ್ ಫ್ರಾಫಿಟ್ ಸಂಸ್ಥೆಯಾದ ಇಕೋ ಹೆಲ್ತ್ ಅಲಯನ್ಸ್ ಮಾಜಿ ಉಪಾಧ್ಯಕ್ಷ ಆ್ಯಂಡ್ಯೂ ಹಫ್ ಈ ಮಾಹಿತಿ ಹೊರಗೆಡಹಿದ್ದಾರೆ. ಚೀನಾದಲ್ಲಿ ನಡೆದ ಸಂಶೋಧನೆ ವೇಳೆ ಸೂಕ್ತ ಸುರಕ್ಷತೆ ವಹಿಸದ್ದರಿಂದ ವುಹಾನ್ ಲ್ಯಾಬ್ನಿಂದ ವೈರಸ್ ಲೀಕ್ ಆಗಿತ್ತು ಎಂದು ಅವರು ತಿಳಿಸಿದ್ದಾರೆ.
ಚೀನಾ ಸರ್ಕಾರಕ್ಕೆ ಮೊದಲ ದಿನದಿಂದಲೂ ಈ ಬಗ್ಗೆ ಗೊತ್ತಿತ್ತು. ಚೀನಾಗೆ ಅಪಾಯಕಾರಿ ಬಯೋಟೆಕ್ನಾಲಜಿ ಕೊಟ್ಟಿದ್ದೇ ಯುಎಸ್ ಸರ್ಕಾರ. ಅವರಿಗೆ ನಾವು ಜೈವಿಕ ಅಸ್ತ್ರ ತಂತ್ರಜ್ಞಾನ ಕೊಟ್ಟಿದ್ದೆವು, ಅಂದು ನಡೆದಿದ್ದನ್ನು ನೋಡಿ ನಾವೇ ಭಯಗೊಂಡಿದ್ದೆವು ಎಂಬುದಾಗಿ ಆ್ಯಂಡ್ರೂ ಹಫ್ ದ ಸನ್ಗೆ ಹೇಳಿದ್ದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.