ಬೆಂಗಳೂರು: ರಾಯಚೂರು ಜಿಲ್ಲೆಯ ತಿಂಥಣಿ-ದೇವದುರ್ಗ-ಕಲ್ಮಲಾ ರಾಜ್ಯ ಹೆದ್ದಾರಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಮಗದಿಂದ ಸ್ಥಾಪಿತ ಟೋಲ್ ಗೇಟ್‌ಗಳಿಗೆ ಉಂಟಾಗಿರುವ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ರಾಯಚೂರು ಜಿಲ್ಲೆ ಜನರಿಗೆ ಅನಗತ್ಯ ಭಾರವಾಗಬಾರದು. ವೈಜ್ಞಾನಿಕವಾಗಿ ಶುಲ್ಕ ಸಂಗ್ರಹ ಜಾರಿಗೆ ತರುವ ಬಗ್ಗೆ ಚರ್ಚಿಸಿ, ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ದೇವದುರ್ಗ ತಾಲೂಕಿನ ಎರಡು ಟೋಲ್‌ಗಳನ್ನು ಕೈಬಿಡಲು ಲೋಕೋಪಯೋಗಿ ಸಚಿವರು ಒಪ್ಪಲಿಲ್ಲವೆಂದು ದೇವದುರ್ಗ ಶಾಸಕಿ ಕರೆಮ್ಮ ನಾಯಕ ಸಿಟ್ಟಿಗೆದ್ದು ಸಭೆಯಿಂದ ಅರ್ಧಕ್ಕೆ ಎದ್ದು ಹೊರಬಂದ ಅವರು ಕಣ್ಣೀರು ಹಾಕಿದ ಪ್ರಸಂಗ ವಿಕಾಸಸೌಧದ ಬಳಿ ಬುಧವಾರ ನಡೆಯಿತು.
ಟೋಲ್ ಬಗ್ಗೆ ನಿರ್ಧರಿಸುತ್ತೇವೆ ಎಂದು ಸಭೆ ಕರೆದು, ಕೈಬಿಡಲಾಗದು ಎಂದ ಕಾರಣ ಸಭೆಯಿಂದ ಹೊರಗೆ ಬಂದಿದ್ದೇನೆ. ದೊಡ್ಡ ಸ್ಕೀಮ್‌ಗಳು, ಕಲ್ಯಾಣ ಕಾರ್ಯಕ್ರಮಗಳನ್ನು ಕೊಡುವ ಸರ್ಕಾರಕ್ಕೆ ಎರಡು ಟೋಲ್ ರದ್ದು ಮಾಡುವುದು ದೊಡ್ಡದೇನಲ್ಲ. ಟೋಲ್ ರದ್ದು ಮಾಡಿದರೆ ಸರ್ಕಾರಕ್ಕೆ ನಷ್ಟವಾಗುತ್ತದೆ ಎನ್ನುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹೆದ್ದಾರಿಯ ಕಾಕರಗಲ್, ಜಾಲಹಳ್ಳಿ ಬಳಿ ಟೋಲ್ ಗೇಟ್‌ಗಳಿವೆ. 40 ಕಿ.ಮೀ. ಅಂತರದೊಳಗೆ ಇರುವುದು ಅವೈಜ್ಞಾನಿಕ, ನಿಯಮಬಾಹಿರವಾಗಿದೆ. ಸ್ಥಳೀಯರಿಗೆ ಓಡಾಡಲು ಬಳಕೆ ರಸ್ತೆ ಅಥವಾ ಪರ್ಯಾಯ ಮಾರ್ಗಗಳಿಲ್ಲ.
ಪರ್ಯಾಯ ವ್ಯವಸ್ಥೆ ಮಾಡುವ ತನಕ ಟೋಲ್‌ಗೆ ವಿನಾಯಿತಿ ನೀಡಲು ಕೇಳಿದರೂ ಒಪ್ಪಿಲ್ಲ. ಅದು ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಅನುದಾನ, ಬೇರೆ ಯೋಜನೆ ಕೇಳು ಎಂದರು. ಹೆದ್ದಾರಿ ಡಾಂಬರೀಕರಣ ಮಾಡಲು 40 ಕೋಟಿ ರೂ. ಸುರಿದಿದ್ದಾರೆ. ಆದರೆ ಅಲ್ಲಲ್ಲಿ ತಗ್ಗು, ಗುಂಡಿಗಳು ಬಿದ್ದು ಹದೆಗಟ್ಟಿದೆ ಎಂದು ಕರೆಮ್ಮ ನಾಯಕ ದೂರಿದರು.
ಟೋಲ್ ರದ್ದುಪಡಿಸಲು ಒತ್ತಾಯಿಸಿ ಚಳವಳಿ ಹೂಡಿದಾಗ ಬೆಂಗಳೂರಿನಲ್ಲಿ ಸಭೆ ಕರೆದು ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಭರವಸೆ ನೀಡಿ ಧರಣಿ ಹಿಂತೆಗೆಯಿಸಿದರು. ಸಚಿವರ ಸಭೆ ಕರೆದರಾದರೂ ಟೋಲ್ ರದ್ದು ಮಾಡಲು ಒಪ್ಪದೆ, ಭರವಸೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ.
ಜೆಡಿಎಸ್ ಶಾಸಕಿಯಾಗಿರುವ ಕಾರಣ ಈ ರೀತಿ ಅಸಹಕಾರ ತೋರಿಸುತ್ತಿರುವ ಅನುಮಾನವಿದ್ದು, ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸಲು ಹೋರಾಡುತ್ತಿರುವೆ. ಸಚಿವರು ಒಪ್ಪದ ಬಗ್ಗೆ ಪಕ್ಷದ ನಾಯಕರ ಗಮನಕ್ಕೆ ತರುವೆ, ವಿಧಾನಸಭೆ ಅಧಿವೇಶನದಲ್ಲಿ ಉಪವಾಸ ಕುಳಿತುಕೊಳ್ಳುವೆ ಎಂದು ಕರೆಮ್ಮ ನಾಯಕ ಎಚ್ಚರಿಸಿದರು.