ತೀರ್ಥಹಳ್ಳಿ: ವಾಹನ ದಟ್ಟಣೆ ಹಿನ್ನೆಲೆಯಲ್ಲಿ ಸಂಪರ್ಕ ವ್ಯವಸ್ಥೆ ಅಭಿವೃದ್ಧಿ ಪಡಿಸುವುದು ಅನಿವಾರ್ಯ. ಪರಿಸರ ರಕ್ಷಣೆಯನ್ನೂ ಗಮನದಲ್ಲಿಟ್ಟುಕೊಂಡು ಹೆದ್ದಾರಿ ಅಗಲೀಕರಣ ನಡೆಯಲಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಶಾಸಕ ಆರಗ ಜ್ಞಾನೇಂದ್ರ ಮನವಿ ಮಾಡಿದರು.
ತೀರ್ಥಹಳ್ಳಿ- ನೆಲ್ಲೀಸರ ನಡುವಿನ ಚತುಷ್ಪಥ ಹೆದ್ದಾರಿ ಅಗಲೀಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಬೆಜ್ಜವಳ್ಳಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ಗ್ರಾಮಸ್ಥರು ಮತ್ತು ಪರಿಸರವಾದಿಗಳಿಗೆ ಪ್ರಶ್ನೆಗಳಿಗೆ ಉತ್ತರಿಸಿ, ಸಂಚಾರ ವ್ಯವಸ್ಥೆಗೆ ಸಂಬಂಧಿಸಿ ಪೊಲೀಸ್ ಇಲಾಖೆಯ ವೈಜ್ಞಾನಿಕವಾದ ವರದಿ ಆಧಾರದಲ್ಲಿಯೇ ಹೆದ್ದಾರಿ ಅಗಲೀಕರಣ ನಡೆಯಲಿದೆ. ವಿಕೃತ ಮನಸ್ಸಿನವರ ಬಗ್ಗೆ ಗಮನ ಹರಿಸಲಾಗದು ಎಂದು ಹೇಳಿದರು.
ಅರಣ್ಯ ರಕ್ಷಣೆಯೊಂದಿಗೆ ಅಭಿವೃದ್ಧಿಯೂ ಅನಿವಾರ್ಯವಾಗಿದೆ. ಈ ಯೋಜನೆಯಲ್ಲಿ ಅನಗತ್ಯವಾಗಿ ಒಂದೇ ಒಂದು ಮರವನ್ನೂ ಕಡಿಯಲು ಅವಕಾಶ ನೀಡಬಾರದು. ಅರಣ್ಯ ಇಲಾಖೆ ಕಾಯ್ದೆಯಲ್ಲಿ ಕಾಡುಪ್ರಾಣಿಗಿರುವ ಸ್ವಾತಂತ್ರ್ಯ ಮನುಷ್ಯರಿಗಿಲ್ಲ. ಆನೆ ಮತ್ತಿತರ ಪ್ರಾಣಿಗಳ ಹಾವಳಿಯಿಂದ ಜನರು ನಿದ್ದೆ ಮಾಡುವಂತಿಲ್ಲ. ಕಾಯ್ದೆ ಮಾಡುವವರಿಗೂ ಜನರ ಬಗ್ಗೆ ಕಾಳಜಿ ಇಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ವಸ್ತುಸ್ಥಿತಿ ಅರಿತು ಕಾರ್ಯನಿರ್ವಹಿಸಬೇಕು ಎಂದರು.
ಅರಣ್ಯಾಧಿಕಾರಿ ಶಿವಶಂಕರ್, ತೀರ್ಥಹಳ್ಳಿ ಎಸಿಎ್ ಮಧುಸೂದನ್, ಬೆಜ್ಜವಳ್ಳಿ ಗ್ರಾಪಂ ಅಧ್ಯಕ್ಷ ಗಬಡಿ ಉದಯ್, ಹೆದ್ದಾರಿ ಪ್ರಾಧಿಕಾರದ ಎಇಇ ಮಂಜುನಾಥ್, ಜೆಇ ಶಶಿಧರ ಜೋಯ್ಸ, ನವೀನ್‌ರಾಜ್, ವಲಯ ಅರಣ್ಯಾಧಿಕಾರಿಗಳಾದ ವಿನಯ ಕುಮಾರ್, ಸಂಜಯ್, ಸುನಿಲ್ ಮುಂತಾದವರಿದ್ದರು.