ನ್ಯೂಸ್

ವಿಜ್ಞಾನ ಯಾವುದನ್ನೂ ಸಂಕುಚಿತವಾಗಿ ನಂಬಲ್ಲ

ನವೀನ ಬಿ.ಎಂ

ಶಿವಮೊಗ್ಗ: ವಿಜ್ಞಾನ ಯಾವುದನ್ನೂ ಸಂಕುಚಿತವಾಗಿ ನಂಬುವುದಿಲ್ಲ. ಅದು ನಿರ್ದಿಷ್ಟ, ನಿಖರ ಮಾಹಿತಿಯನ್ನು ಮಾತ್ರ ನಂಬುತ್ತದೆ ಎಂದು ಮಾನಸಿಕ ಆರೋಗ್ಯ ತಜ್ಞ ಬೆಂಗಳೂರಿನ ಡಾ. ಸಿ.ಆರ್.ಚಂದ್ರಶೇಖರ್ ಹೇಳಿದರು.

ನಗರದ ಕರ್ನಾಟಕ ಸಂಘದಲ್ಲಿ ಭಾನುವಾರ ಸಂಜೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಕೆ.ಶಿವರಾಮ ಕಾರಂತ ವಿಜ್ಞಾನ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದಲ್ಲಿಂದು ನಾವುಗಳು ಹುಸಿ, ತಪ್ಪು ನಂಬಿಕೆಯಿಂದ ತಪ್ಪು ದಾರಿಯಲ್ಲಿ ಹೋಗುತ್ತಿದ್ದೇವೆ. ಹಾಗಾಗಿ ಹುಸಿ ನಂಬಿಕೆಗಳಿಂದ ದೂರ ಇರಬೇಕು. ಹುಸಿ ನಂಬಿಕೆಗಳ ಭಾರ ಹೊತ್ತು ನಡೆಯಬಾರದು. ಅಂತೆ ಕಂತೆ ನಂಬಿ ಬದುಕುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು.

ಅನೇಕಲ್ಲಿ ಇಂದು ಮನಸ್ಸಿನಲ್ಲಿ ತಪ್ಪಿತಸ್ಥ ಭಾವನೆ ಕಾಡುತ್ತಿರುತ್ತದೆ. ಮೋಜು ಮಸ್ತಿ ಮಾಡದೇ ಮಾಡಿರುವ ತಪ್ಪಿಗೆ ಕ್ಷಮೆ ಕೇಳುವ ಗುಣ ಬೆಳೆಸಿಕೊಳ್ಳಬೇಕು. ತಪ್ಪಿಗೆ ಕ್ಷಮಿಸುವ ವ್ಯವದಾನವೂ ಇರಬೇಕು. ಕ್ಷಮಿಸದೇ ಪಾಪಪ್ರಜ್ಞೆ ಬೆಳೆಸಿಕೊಳ್ಳಬೇಡಿ ಎಂದು ಸಲಹೆ ನೀಡಿದರು.

ಡಾ. ಶಂಬಾ ಜೋಶಿ ಸಂಶೋಧನಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂಶೋಧಕಿ ಮೈಸೂರಿನ ಡಾ. ಟಿ.ಎನ್.ನಾಗರತ್ನಾ, ವೃತ್ತಿ ಜೀವನದಲ್ಲಿ ಸಾಕಷ್ಟು ಪ್ರಶಸ್ತಿಗಳು ಬಂದಿರಬಹುದು. ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳು ನನ್ನನ್ನು ಅರಸಿಬಂದಿರಬಹುದು. ಆದರೆ ತವರಿನ ನೂಲು ಹೆಚ್ಚು. ತವರು ಕೊಡುತ್ತಿರುವ ಬಾಗಿನ ಇದು. ಮನಸ್ಸಿನಲ್ಲಿ ನನ್ನ ಊರೇ ನನ್ನನ್ನು ಗುರುತಿಸಲಿಲ್ಲ ಎಂಬ ಕೊರಗು ಮನಸ್ಸಿನಲ್ಲಿತ್ತು. ಆ ಕೊರಗು ದೂರವಾಯಿತು ಎಂದರು.

ಜೀವಮಾನ ಸಾಧನೆಗೆ ಸಂಘ ನೀಡಿದ ಎರಡೂ ಪ್ರಶಸ್ತಿಯು ಸ್ಮರಣಿಕೆ ಹಾಗೂ ತಲಾ 25 ಸಾವಿರ ರೂ. ನಗದು ಪುರಸ್ಕಾರ ಒಳಗೊಂಡಿತ್ತು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಸಂಶೋಧಕ ಮೈಸೂರಿನ ಪ್ರೊ. ಎನ್.ಎಂ.ತಳವಾರ್, ವೈದ್ಯೆ ಡಾ. ಕೆ.ಎಸ್.ಪವಿತ್ರಾ, ಸಂಘದ ಕಾರ್ಯದರ್ಶಿ ವಿನಯ್ ಶಿವಮೊಗ್ಗ ಉಪಸ್ಥಿತರಿದ್ದರು.