ಭದ್ರಾವತಿಯಲ್ಲಿ ಆಯೋಜಿಸಿದ್ದ ಸನಾತನ ಸೌರಭ ಕಾರ್ಯಕ್ರಮದಲ್ಲಿ ಚಿಂತಕ ಎಂ.ಎಸ್.ವಿನಾಯಕ, ಎಚ್.ಎನ್.ಸುಬ್ರಹ್ಮಣ್ಯ, ರಮೇಶ್, ಕೃಷ್ಣಸ್ವಾಮಿ, ಕೃಷ್ಣ ಉಪಾಧ್ಯಾಯ ಇದ್ದರು.  
ನ್ಯೂಸ್

ವಿಜ್ಞಾನ-ವೇದಗಳಿಗೆ ಇದೆ ಪರಸ್ಪರ ಸಂಬಂಧ

ಭದ್ರಾವತಿ: ಸನಾತನ ಧರ್ಮ, ಮಾನವ ಕುಲಕ್ಕೆ ಆಚಾರ್ಯತ್ರಯರಾದ ಶ್ರೀ ಶಂಕರಾಚಾರ್ಯ, ಶ್ರೀ ರಾಮಾನುಜಾಚಾರ್ಯ, ಶ್ರೀ ಮಧ್ವಾಚಾರ್ಯರು ತಮ್ಮದೇ ಆದ ಸಿದ್ಧಾಂತಗಳ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ ಎಂದು ಚಿಂತಕ ಎಂ.ಎಸ್.ವಿನಾಯಕ ಹೇಳಿದರು.

ಹಳೇನಗರದ ಗಾಯತ್ರಿ ಭವನದಲ್ಲಿ ಸಂಸ್ಕೃತಿ ಸೌರಭ ಸಂಸ್ಥೆ ಹಾಗೂ ತಾಲೂಕು ಬ್ರಾಹ್ಮಣ ಸಂಘದಿಂದ ಏರ್ಪಡಿಸಿದ್ದ ಸನಾತನ ಸೌರಭ ಕಾರ್ಯಕ್ರಮದಲ್ಲಿ ಆಚಾರ್ಯತ್ರಯರ ಸಂದೇಶಗಳ ಕುರಿತು ಉಪನ್ಯಾಸ ನೀಡಿದರು.

ವಿಶ್ವಕ್ಕೇ ಬೆಳಕು ಚೆಲ್ಲುವ ವೇದಗಳಿಗೆ ಆಚಾರ್ಯತ್ರಯರು ಭಾಷ್ಯ ಬರೆದರು. ತನ್ನ ವೈಜ್ಞಾನಿಕ ಸಂಶೋಧನೆಯಲ್ಲಿ ವೇದಗಳು ಪ್ರಮುಖ ಪಾತ್ರವಹಿಸಿವೆ ಎಂದು ಪ್ರಸಿದ್ಧ ವಿಜ್ಞಾನಿ ನ್ಯೂಟನ್ ಮುಕ್ತ ಮನಸ್ಸಿನಿಂದ ಹೇಳಿಕೊಂಡಿದ್ದಾರೆ. ಈ ಮೂಲಕ ವೇದಗಳ ಉಪಯುಕ್ತತೆ ಏನು ಎಂಬುದನ್ನು ಸಾರಿದ್ದಾರೆ ಎಂದರು.

ಅದ್ವೈತ ಸಿದ್ಧಾಂತ ಪ್ರತಿಪಾದಕರಾದ ಶ್ರೀ ಶಂಕರಾಚಾರ್ಯರು ಭಾರತದ ನಾಲ್ಕು ದಿಕ್ಕುಗಳಲ್ಲಿ ಶಾರದಾ ಪೀಠಗಳನ್ನು ಸ್ಥಾಪಿಸಿ, ಮಠಾಧಿಪತಿಗಳನ್ನು ನಿಯೋಜಿಸಿದ್ದರು. ಭಾರತ ದೇಶದ ಅಖಂಡತೆ ಹಾಗೂ ಸನಾತನ ಧರ್ಮದ ಆಧ್ಯಾತ್ಮಿಕ ಜಗತ್ತಿಗೆ ವಿಶೇಷ ಕೊಡುಗೆ ನೀಡಿದ್ದಾರೆ. 120 ವರ್ಷಗಳ ಕಾಲ ಬಾಳಿದ, ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಕ ರಾಮಾನುಜಾಚಾರ್ಯರು ಜಾತಿ ಭೇದವಿಲ್ಲದೆ ಎಲ್ಲರಿಗೂ ದೇವಾಲಯಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಮೂಲಕ ಸನಾತನ ಧರ್ಮಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ.

ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣ ಮಠವನ್ನು ಸ್ಥಾಪಿಸಿದರು. ಎಲ್ಲ ಜಾತಿ, ವರ್ಗದವರಿಗೂ ಭಗವಂತನ ದಶರ್ನಕ್ಕೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಿದವರು. ಆದ್ದರಿಂದ ಸನಾತನ ಧರ್ಮಕ್ಕೆ ಆಚಾರ್ಯತ್ರಯರ ಕೊಡುಗೆ ಅಪಾರ ಎಂದು ತಿಳಿಸಿದರು.

ಸಂಸ್ಕೃತಿ ಸೌರಭದ ಅಧ್ಯಕ್ಷ ಎಚ್.ಎನ್.ಸುಬ್ರಹ್ಮಣ್ಯ ಮಾತನಾಡಿ, ಬ್ರಾಹ್ಮಣ ಸಮಾಜ ಇಂದು ಸಂಕಷ್ಟದಲ್ಲಿದೆ. ಇಂದು ಜನಿವಾರಕ್ಕೆ ಕೈಹಾಕಿದವರು ನಾಳೆ ಜುಟ್ಟಿಗೂ ಕತ್ತರಿ ಹಾಕಬಹುದು. ಆದ್ದರಿಂದ ತ್ರಿಮತಸ್ಥ ಬ್ರಾಹ್ಮಣರು ತಮ್ಮೊಳಗಿನ ಸಣ್ಣಪುಟ್ಟ ವೈರುಧ್ಯ, ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಬ್ರಾಹ್ಮಣ್ಯದ ಉಳಿವಿಗೆ ಮತ್ತು ಸನಾತನ ಧರ್ಮದ ಹಿತಕ್ಕಾಗಿ ಸಂಘಟಿತರಾಗಬೇಕು ಎಂದರು.

ತಾಲೂಕು ಬ್ರಾಹಣ ಸಮಾಜದ ಅಧ್ಯಕ್ಷ ರಮೇಶ್, ಕೃಷ್ಣಸ್ವಾಮಿ, ಸಂಸ್ಥೆಯ ಉಪಾಧ್ಯಕ್ಷ ಕೃಷ್ಣ ಉಪಾಧ್ಯಾಯ ಇತರರಿದ್ದರು.