ನ್ಯೂಸ್

ಸಾವಿರಾರು ವರ್ಷಗಳ ಹಿಂದೆಯೇ ಭಾರತದಲ್ಲಿ ವಿಜ್ಞಾನ ತಂತ್ರಜ್ಞಾನ ಅಸ್ತಿತ್ವದಲ್ಲಿತ್ತು : ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್​ | Hanuman In Space

Hanuman In Space : ಬಿಜೆಪಿ ನಾಯಕ ಅನುರಾಗ್ ಠಾಕೂರ್​ ಶಾಲಾ ವಿದ್ಯಾರ್ಥಿಗಳಿಗೆ ಹನುಮಂತ ಮೊದಲ ಬಾಹ್ಯಾಕಾಶ ಯಾತ್ರಿಯಾಗಿರಬಹುದು ಎಂಬ ಹೇಳಿಕೆ ನೀಡಿದ ಕೆಲವು ದಿನಗಳ ಬಳಿಕ ಅದೇ ಪಕ್ಷದ ಹಿರಿಯ ಸಹೋದ್ಯೋಗಿ ಶಿವರಾಜ್ ಸಿಂಗ್​ ಚೌಹಾಣ್​ ರೈಟ್​ ಸಹೋದರರು ವಿಮಾನವನ್ನು ಕಂಡುಹಿಡಿಯುವ ಮೊದಲೇ ಭಾರತದಲ್ಲಿ ಹಾರುವ ಯಂತ್ರಗಳು ಇದ್ದವು ಎಂದು ತಿಳಿಸಿದ್ದಾರೆ.

ಭೋಪಾಲ್​ನಲ್ಲಿರುವ ಭಾರತೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಚೌಹಾಣ್​ ಮಾತನಾಡಿ, ಪುಷ್ಪಕ ವಿಮಾನವನ್ನು ಉಲ್ಲೇಖಿಸಿದ್ದು, ಪ್ರಾಚೀನ ಭಾರತದಲ್ಲಿ ತಂತ್ರಜ್ಞಾನ ಮುಂದುವರೆದಿತ್ತು. ಇನ್ನು  ರೈಟ್​ ಸಹೋದರರು ವಿಮಾನವನ್ನು ಕಂಡುಹಿಡಿಯುವ ಮೊದಲೇ ನಮ್ಮಲ್ಲಿ ಪುಷ್ಪಕ ವಿಮಾನಗಳಿದ್ದವು. ಈಗಿರುವ ಡ್ರೋನ್​ಗಳು ಹಾಗೂ ಕ್ಷಿಪಣಿಗಳು ಸಾವಿರಾರು ವರ್ಷಗಳ ಹಿಂದಿನಿಂದಲೇ ಇದ್ದವು. ಇದನ್ನೆಲ್ಲವನ್ನೂ ನಾನು ಮಹಾಭಾರತದಲ್ಲಿ ಓದಿದ್ದೇನೆ. ನಮ್ಮ ದೇಶದ ವಿಜ್ಞಾನ ಹಾಗೂ ತಂತ್ರಜ್ಞಾನವು ಬಹಳ ವರ್ಷಗಳ ಹಿಂದೆಯೇ ಅಭಿವೃದ್ದಿಯತ್ತ ಹೆಜ್ಜೆ ಇಟ್ಟಿತ್ತು ಎಂದು ಚೌಹಾಣ್ ತಿಳಿಸಿದ್ದಾರೆ.

ಇತಿಹಾಸ ಪಠ್ಯಗಳು ವಿಶ್ವದ ಮೊದಲ ಚಾಲಿತ ವಿಮಾನ ಹಾರಾಟವನ್ನು ಅಮೇರಿಕಾದ ಸಂಶೋಧಕ ಓರ್ವಿಲ್ಲೆ ಮತ್ತು ವಿಲ್ಬರ್ ರೈಟ್ ಕಾರಣ ಎಂದು ಸೂಚಿಸುತ್ತದೆ. ಇವರು 1903ರಲ್ಲಿ ಉತ್ತರ ಕೆರೊಲಿನಾದ ಕಿಟ್ಟಿ ಹಾಕ್‌ನಲ್ಲಿ ಯಾಂತ್ರಿಕೃತ ವಿಮಾನವನ್ನು ಯಶಸ್ವಿಯಾಗಿ ಹಾರಿಸಿದರು. ಈ ಸಾಧನೆಯು ಆಧುನಿಕ ವಾಯುಮಾನದ ಆರಂಭಕ್ಕೆ ಮುನ್ನಣೆ ಬರೆಯಿತು.

ಚೌಹಾಣ್ ಅವರ ನೀಡುವ ಹೇಳಿಕೆಗಳು, ಪ್ರಾಚೀನ ಗ್ರಂಥಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರೆದಿದೆ ಎಂದು ಹೇಳುತ್ತಿರುವ ಹಲವರು ಭಾರತೀಯ ನಾಯಕರ ಸಾಲಿನಲ್ಲಿ ಇವರೂ ಕೂಡ ಒಬ್ಬರಾಗಿದ್ದಾರೆ. ಇನ್ನು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಚೌಹಾಣ್ ಅವರು ಪುಷ್ಪಕ ವಿಮಾನವು ಪಾಶ್ಚಿಮಾತ್ಯ ತಾಂತ್ರಿಕ ಪ್ರಗತಿಗಿಂತ ಬಹಳ ಹಿಂದೆಯೇ ಭಾರತದಲ್ಲಿ ವಾಯುಮಾನ ಅಸ್ತಿತ್ವದಲ್ಲಿದೆ ಎಂಬುದಕ್ಕೆ ಸಾಕ್ಷಿಗಳಿವೆ ಎಂದು ತಿಳಿಸಿದ್ದಾರೆ.

ಹಿನ್ನಲೆ ಏನಾಗಿತ್ತು?

ಈ ವಾರದ ಆರಂಭದಲ್ಲಿ ಬಿಜೆಪಿ ಹಿರಿಯ ನಾಯಕರಾದ ಅನುರಾಗ್​ ಠಾಕೂರ್​ ವಿದ್ಯಾರ್ಥಿಗಳೊಮದಿಗೆ ಸಂವಾದ ನಡೆಸುವ ಸಮಯದಲ್ಲಿ ಭಗವಾನ್​ ಹನುಮಂತನನ್ನು ಮೊದಲ ಬಾಹ್ಯಾಕಾಶ ಯಾತ್ರಿ ಎಂದು ಪರಿಗಣಿಸಬಹುದು ಎಂದು ಹೇಳಿದ್ದರು. ಇದಾದ ಕೆಲವು ದಿನಗಳ ಬಳಿಕ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಗ್ಗೆ ಈ ರತಿಯಾಗಿ ಹೇಳಿಕೆ ನೀಡಿದ್ದಾರೆ.

(ಏಜೆನ್ಸೀಸ್)