ನ್ಯೂಸ್

ಹಿಜಾಬ್​-ಕೇಸರಿ ಸಂಘರ್ಷ: ಶಾಲಾ-ಕಾಲೇಜು ಮರು ಆರಂಭದ ಬಗ್ಗೆ ಹೀಗಂದ್ರು ಸಿಎಂ

ಬೆಂಗಳೂರು: ಹಿಜಾಬ್​ ಧರಿಸಿ ತರಗತಿಗೆ ಹಾಜರಾಗುವ ವಿಚಾರವಾಗಿ ಭುಗಿಲೆದ್ದ ವಿವಾದ, ಬಳಿಕ ಹಿಜಾಬ್​-ಕೇಸರಿ ಸಂಘರ್ಷವಾಗಿ ಮಾರ್ಪಟ್ಟು ರಾಜ್ಯಾದ್ಯಂತ ವ್ಯಾಪಿಸುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿತ್ತು. ಮಾತ್ರವಲ್ಲ, ಈ ಬಗ್ಗೆ ನಿರ್ಧಾರ ತಳೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೂರು ದಿನಗಳ ಕಾಲ ರಜೆ ಘೋಷಿಸಿದ್ದರು.

ಆ ಪ್ರಕಾರ ಶಾಲಾ-ಕಾಲೇಜುಗಳ ರಜೆ ಶನಿವಾರಕ್ಕೆ ಮುಗಿಯಲಿದೆ. ಈ ಮಧ್ಯೆ ಹಿಜಾಬ್​ ವಿಚಾರವಾಗಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದು, ಇಂದು ಅದರ ವಿಚಾರಣೆ ನಡೆದಿದೆ. ಹೈಕೋರ್ಟ್ ಕೂಡ ಶಾಲೆ-ಕಾಲೇಜುಗಳನ್ನು ಮರು ಆರಂಭಿಸುವಂತೆ ಸೂಚನೆ ನೀಡಿದೆ.

ಸದ್ಯ ಪ್ರಕರಣ ಇತ್ಯರ್ಥವಾಗದ್ದರಿಂದ, ಶಾಲಾ-ಕಾಲೇಜು ಮರು ಆರಂಭಿಸಬಹುದು. ಆದರೆ ಮುಂದಿನ ಆದೇಶದವರೆಗೆ ಯಾವುದೇ ವಿದ್ಯಾರ್ಥಿ-ವಿದ್ಯಾರ್ಥಿನಿ ಹಿಜಾಬ್​-ಶಾಲು ಸೇರಿ ಯಾವುದೇ ಧರ್ಮದ ಸೂಚಕವಾದ ಉಡುಪು ಧರಿಸಿ ತರಗತಿಗೆ ಹಾಜರಾಗುವಂತಿಲ್ಲ ಎಂದು ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಲೆ ಮರು ಆರಂಭದ ಬಗ್ಗೆ ಮಾತನಾಡಿದ್ದಾರೆ.

ಹತ್ತರ ವರೆಗಿನ ಎಲ್ಲ ತರಗತಿಗಳನ್ನು ಸೋಮವಾರ ಮರು ಆರಂಭಿಸಲಾಗುವುದು. ಆದರೆ ಕಾಲೇಜು ಆರಂಭದ ಕುರಿತು ಮುಂದೆ ತಿಳಿಸಲಾಗುವುದು ಎಂದು ಸಿಎಂ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.