ನ್ಯೂಸ್

ಪಠ್ಯಪುಸ್ತಕ, ಶಿಕ್ಷಕರ ಕೊರತೆ ನಡುವೆಯೇ ಮೇ 29ರಿಂದ ಶಾಲೆಗಳು ಆರಂಭ

ಬೆಂಗಳೂರು ರಾಜ್ಯಾದ್ಯಂತ 2024-25ನೇ ಶೈಕ್ಷಣಿಕ ಸಾಲಿನ ಶಾಲೆಗಳು 29ರಿಂದ ಪುನಾರಂಭಗೊಳ್ಳುತ್ತಿವೆ. ಮೊದಲ ಎರಡು ದಿನ ಶಾಲೆಗಳ ಸ್ವಚ್ಚತಾ ಕಾರ್ಯ ನಡೆಯಲಿದ್ದು, ಮೇ 31ರಂದು ಮಕ್ಕಳಿಗೆ ಸಿಹಿ ನೀಡಿ ‘ಶಾಲಾ ಪ್ರಾರಂಭೋತ್ಸವ’ ನಡಸುವಂತೆ ಶಾಲಾ ಶಿಕ್ಷಣ ಇಲಾಖೆಯು ಎಲ್ಲ ಶಾಲೆಗಳಿಗೆ ಸೂಚನೆ ನೀಡಿದೆ.

ಶಾಲಾ ಸ್ವಚ್ಛತಾ ಕಾರ್ಯ, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಬೇಕು. ತರಗತಿ/ಸಿಬ್ಬಂದಿ ಕೊಠಡಿ, ಶಾಲಾ ಮೈದಾನ, ನೀರಿನ ಟ್ಯಾಂಕ್, ಅಡುಗೆ ಕೋಣೆ, ಆಹಾರ ಧಾನ್ಯಗಳ ಸ್ವಚ್ಛತೆ ಮತ್ತು ಅಡುಗೆ ಪರಿಕರಗಳನ್ನು ಸ್ವಚ್ಛಗೊಳಿಸುವಂತೆ ತಿಳಿಸಿದ್ದಾರೆ.

ಮೇ 29ರಂದು ಶಿಕ್ಷಕರು ವರ್ಷದ ಶೈಕ್ಷಣಿಕ ಚಟುವಟಿಕೆಗಳ ಕುರಿತು ಶಾಲಾ, ತರಗತಿ, ಶಿಕ್ಷಕರ ವೇಳಾಪಟ್ಟಿ, ವಾರ್ಷಿಕ ಕ್ರಿಯಾ ಯೋಜನೆ, ಶಿಕ್ಷಕರು ಪಾಠ ಯೋಜನೆ ತಯಾರಿಸಿಕೊಳ್ಳುವುದು. ಶಾಲಾಭಿವೃದ್ಧಿ ಯೋಜನೆ, ಶಾಲೆ ಬಿಟ್ಟಿರುವ ಮಕ್ಕಳನ್ನು ಗುರುತಿಸಿ ವಿಶೇಷ ದಾಖಲಾತಿ ಮಾಡಿಕೊಳ್ಳಲು ಜಾಥಾ, ಪ್ರಭಾತ್ ಪೇರಿ, ಮನೆ ಭೇಟಿ ಮುಂತಾದ ಕ್ರಮಗಳನ್ನು ಹಮ್ಮಿಕೊಳ್ಳುವುದು.

ಮೇ 31ರಂದು ಮಕ್ಕಳಿಗೆ ಸಿಹಿ ಊಟ ವಿತರಿಸಿ ಪ್ರಾರಂಭೋತ್ಸವ ಮಾಡಬೇಕು. ಶಾಲಾರಂಭದ ದಿನವೇ ಉಚಿತ ಪಠ್ಯಪುಸ್ತಕ ಮತ್ತು ಸಮವಸಗಳನ್ನು ವಿತರಿಸಬೇಕು. ಜೂ.1ರಿಂದ 30ರವರೆಗೆ ಸೇತುಬಂಧ ಕಾರ್ಯಕ್ರಮ ನಡೆಸಬೇಕು ಎಂದು ಸೂಚಿಸಿದ್ದಾರೆ.

ಜಿಲ್ಲೆಗಳಿಗೆ ಶೇ.70ರಷ್ಟು ಪಠ್ಯಪುಸ್ತಕ ರವಾನೆ

ಶಾಲೆಗಳಲ್ಲಿ ಮೊದಲನೇ ದಿನದಿಂದಲೇ ಪಠ್ಯಪುಸ್ತಕಗಳನ್ನು ಮತ್ತು ಸಮವವಸಗಳನ್ನು ನೀಡಬೇಕೆಂಬ ಸೂಚನೆ ನೀಡಲಾಗಿದೆ. ಸೋಮವಾರದತನಕ ಶೇ.70 ಪಠ್ಯಪುಸ್ತಕಗಳು ಜಿಲ್ಲಾ ಕೇಂದ್ರಗಳಿಗೆ ತಲುಪಿಸಲಾಗಿದೆ. ಇನ್ನುಳಿದ ಪಠ್ಯಪುಸ್ತಕಗಳನ್ನು ಹಂತಹಂತವಾಗಿ ತಲುಪಿಸಲಾಗುತ್ತದೆ.

ಬಾಲಕಿಯರಿಗೆ ಲಂಗದ ಬದಲು ಚೂಡಿದಾರ್

ಈ ಬಾರಿ ಶಾಲಾ ಮಕ್ಕಳಿಗೆ ಖುಷಿ ವಿಚಾರವಾಗಿ ಶಾಲಾರಂಭದಲ್ಲಿಯೇ 2 ಜೊತೆ ಸಮವಸವನ್ನು 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಮೊದಲ ಜಪತೆಯನ್ನು ಜೂನ್‌ನಲ್ಲಿ ಮತ್ತು 2ನೇ ಜೊತೆಯನ್ನು ಡಿಸೆಂಬರ್‌ನಲ್ಲಿ ನೀಡಲಾಗುತ್ತಿತ್ತು. ಕಳೆದ ವರ್ಷ ಒಂದೇ ಜೊತೆ ಸಮವಸ ವಿತರಣೆ ಮಾಡಿತ್ತು. ಆದರೆ, ಈ ಬಾರಿ ಆರಂಭದಲ್ಲಿಯೇ ಎರಡೂ ಜೊತೆಯನ್ನು ವಿತರಣೆ ಮಾಡಿದೆ.

ಸಮವಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. 8,9 ಮತ್ತು 10ನೇ ತರಗತಿ ವಿದ್ಯಾರ್ಥಿನಿಯರಿಗೆ ಮಾತ್ರ ನೀಡುತ್ತಿದ್ದ ಚೂಡಿದಾರವನ್ನು ಈ ವರ್ಷದಿಂದ 6 ಮತ್ತು 7ನೇ ತರಗತಿ ವಿದ್ಯಾರ್ಥಿನಿಯರಿಗೂ ನೀಡುತ್ತಿದೆ. ತಿಳಿ ನೀಲಿ ಬಣ್ಣದ ಟಾಪ್ ಮತ್ತು ಕಡು ನೀಲಿ ಬಣ್ಣದ ದುಪ್ಪಟವನ್ನು ವಿತರಣೆ ಮಾಡಲಾಗಿದೆ. ಉಳಿದಂತೆ 1ರಿಂದ 7ನೇ ತರಗತಿ ಬಾಲಕರಿಗೆ ಚಡ್ಡಿ ಮತ್ತು ಅಂಗಿ, 6ನೇ ತರಗತಿ ಮೇಲ್ಪಟ್ಟವರಿಗೆ ಪ್ಯಾಂಟ್ ನೀಡಲಾಗಿದೆ.

50 ಸಾವಿರಕ್ಕೂ ಹೆಚ್ಚಿನ ಶಿಕ್ಷಕರ ಕೊರತೆ

ಶಾಲೆಗಳು ಆರಂಭವಾಗುತ್ತಿದ್ದರೂ ಶಿಕ್ಷಣ ಇಲಾಖೆ ಮಾತ್ರ ಈ ವರೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಯಾವುದೇ ಆದೇಶವನ್ನು ಪ್ರಕಟಿಸಿಲ್ಲ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿ ಅಂದಾಜು 50 ಸಾವಿರಕ್ಕೂ ಹೆಚ್ಚಿನ ಶಿಕ್ಷಕರ ಕೊರತೆ ಎದುರಿಸಲಾಗುತ್ತಿದೆ.