ನ್ಯೂಸ್

14ರ ಬಾಲೆಗೆ ಮಗು ಕರುಣಿಸಿದ್ದ 11ರ ಪೋರ? ಕಠೋರ ಸತ್ಯ ತಿಳಿದ ಬೆನ್ನಲ್ಲೇ ಗರ್ಲ್​ಫ್ರೆಂಡ್​ಗೆ ಗುಡ್​ಬೈ!

ಮಾಸ್ಕೋ: ತನ್ನ ಹೆಣ್ಣು ಮಗುವಿನ ತಂದೆ 11 ವರ್ಷದ ಬಾಲಕ ಎಂದಿರುವ 14 ವರ್ಷದ ಬಾಲಕಿಯ ಹೇಳಿಕೆ ಸುಳ್ಳು ಎಂಬುದು ಡಿಎನ್​ಎ ಪರೀಕ್ಷೆಯಲ್ಲಿ ಬಯಲಾದ ಬೆನ್ನಲ್ಲೇ ಸತ್ಯ ತಿಳಿದ ಬಾಲಕ ಆಕೆಯಿಂದ ದೂರವಾಗಿದ್ದಾನೆ.

ಹೆಲೆಜ್ನೋಗೊರ್ಸ್ಕ್​ ನಗರದ ನಿವಾಸಿ ದರ್ಯಾ ಸುಡ್ನಿಶ್ನಿಕೋವಾ, 11 ವರ್ಷದ ಬಾಯ್​ಫ್ರೆಂಡ್​ ಇವಾನ್​​ನಿಂದ ಗರ್ಭಿಣಿಯಾಗಿದ್ದೇನೆಂದು ಈ ಹಿಂದೆ ಮಾಧ್ಯಮವೊಂದರ ಮುಂದೆ ಹೇಳಿಕೆ ನೀಡಿದ್ದಳು. ಇದರ ಬೆನ್ನಲ್ಲೇ ದರ್ಯಾಗೆ ರಷ್ಯಾದಲ್ಲಿ ಬಹು ಪ್ರಚಾರ ದೊರಕಿತ್ತು. ಇದರ ನಡುವೆ ಕಳೆದ ಆಗಸ್ಟ್​ 16ರಂದು ಹೆಣ್ಣು ಮಗುವಿಗೆ ದರ್ಯಾ ಜನ್ಮ ನೀಡಿದ್ದಳು.

ದರ್ಯಾ 16 ವರ್ಷದ ಬಾಲಕ ಎಸಗಿದ ಅತ್ಯಾಚಾರದಿಂದ ಗರ್ಭಿಣಿಯಾಗಿದ್ದಾಳೆಂದು ಮೊದ ಮೊದಲು ನಂಬಲಾಗಿತ್ತು. ಅತ್ಯಾಚಾರ ನಡೆದಿದೆ ಎಂದು ಸ್ವತಃ ದರ್ಯಾ ಒಪ್ಪಿಕೊಂಡಿದ್ದಳು. ಇದರ ಮುಜುಗರದಿಂದ ತಪ್ಪಿಸಿಕೊಳ್ಳಲು ತನ್ನ ಬಾಯ್​ಫ್ರೆಂಡ್ ಇವಾನ್​ ಮಗುವಿನ ತಂದೆ ಎಂದು ಹೇಳಿಕೊಂಡಿದ್ದಳು. ಇವಾನ್​ ಕೂಡ ನಂಬಿದ್ದ. ಅಚ್ಚರಿಯ ಸಂಗತಿಯೆಂದರೆ ಪೊಲೀಸರು ಮಗು ಎಮಿಲಿಯಾ ಡಿಎನ್​ಎ ಪರೀಕ್ಷೆ ಮಾಡಿಸಿದ್ದು, ಮಗುವಿನ ತಂದೆ ಇವಾನ್​ ಎಂದು ಖಚಿತವಾಗಿಲ್ಲ. ಬದಲಾಗಿ ಹದಿಹರೆಯದ (13 ರಿಂದ 19) ಹುಡುಗನೆಂಬುದು ಖಚಿತವಾಗಿದೆ.

ಮಗುವಿನ ತಂದೆ ಬೇರೆ ಎಂಬುದು ಗೊತ್ತಾಗುತ್ತಿದ್ದಂತೆ ಇವಾನ್​, ದರ್ಯಾಳಿಂದ ಪ್ರತ್ಯೇಕವಾಗಿದ್ದಾನೆ. ಆದರೆ, ಈ ಬಗ್ಗೆ ಉಭಯ ಕುಟುಂಬದ ಯಾರೊಬ್ಬರು ಸಹ ಕಾಮೆಂಟ್​ ಮಾಡಿಲ್ಲ.

ಇನ್ನು ಇವಾನ್‌, ದರ್ಯಾಳನ್ನು ಗರ್ಭಿಣಿಯಾಗಿಸುವುದು ಜೈವಿಕವಾಗಿ ಅಸಾಧ್ಯವೆಂದು ಈ ಮೊದಲೇ ವೈದ್ಯರು ಮತ್ತು ತಜ್ಞರು ಹೇಳಿದ್ದರು. ಆಕೆ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂತಲೂ ಆರೋಪಿಸಲಾಗಿತ್ತು. ಡಿಎನ್​ಎ ವರದಿ ಆರೋಪಗಳನ್ನು ಸಾಬೀತು ಮಾಡಿದೆ. ಅತ್ಯಾಚಾರದ ಬಗ್ಗೆ ಹೇಳಿದ್ದ ದರ್ಯಾ, ಹೆಲೆಜ್ನೋಗೊರ್ಸ್ಕ್​ನಲ್ಲಿರುವ ತನ್ನ ಮನೆಯ ಮೆಟ್ಟಿಲುಗಳ ಮೇಲೆ 16 ವರ್ಷದ ಹುಡುಗನಿಂದ ಅತ್ಯಾಚಾರಕ್ಕೆ ಒಳಗಾಗಿದ್ದೆ. ಆತ ತನ್ನ ವಯಸ್ಸಿಗಿಂತ ತುಂಬಾ ದಪ್ಪಗೆ, ಎತ್ತರವಾಗಿದ್ದ ಎಂತಲೂ ಹೇಳಿದ್ದಳು.

ದರ್ಯಾ ಸಾಮಾಜಿಕ ಜಾಲತಾಣದಲ್ಲಿ ಬರೋಬ್ಬರಿ 474,000 ಹಿಂಬಾಲಕರನ್ನು ಹೊಂದಿದ್ದಾಳೆ. ಇದಕ್ಕೆ ಕಾರಣ ಆಕೆಯ ವಯೋಸಹಜವಲ್ಲದ ಗರ್ಭಾವಸ್ಥೆ. ಅಲ್ಲದೆ, 10 ವರ್ಷದ ಬಾಯ್​ಫ್ರೆಂಡ್​ ಇದಾನೆ ಎಂಬುದು ಆಕೆಗೆ ರಷ್ಯಾದಲ್ಲಿ ಪ್ರಖ್ಯಾತಿ ತಂದುಕೊಟ್ಟಿದೆ. ಮಗುವಿಗೆ ಜನ್ಮ ನೀಡಿರುವುದು ಮತ್ತಷ್ಟು ಪ್ರಚಾರ ತಂದು ಕೊಟ್ಟಿದೆ. (ಏಜೆನ್ಸೀಸ್​)