ನ್ಯೂಸ್

ಶೌಚಗೃಹ ದುರಸ್ತಿಗೆ ಆಗ್ರಹಿಸಿ ಹಳೇ ಚಂದಾಪುರ ಗ್ರಾಮಸ್ಥರ ಪ್ರತಿಭಟನೆ

ರಾಣೆಬೆನ್ನೂರ: ಸರ್ಕಾರಿ ಶಾಲೆಯ ಶೌಚಗೃಹ ದುರಸ್ತಿಗೊಳಿಸಲು ಆಗ್ರಹಿಸಿ ತಾಲೂಕಿನ ಹಳೇ ಚಂದಾಪುರ ಗ್ರಾಮಸ್ಥರು ಸೋಮವಾರ ಶೌಚಗೃಹದ ಎದುರು ಪ್ರತಿಭಟನೆ ನಡೆಸಿದರು.
ಕಳೆದೊಂದು ವರ್ಷದಿಂದ ಶಾಲೆಯಲ್ಲಿರುವ ಶೌಚಗೃಹ ದುರಸ್ತಿಯಲ್ಲಿದೆ. ಶೌಚಗೃಹಕ್ಕೆ ಬಾಗಿಲು, ನೀರಿನ ವ್ಯವಸ್ಥೆ ಇಲ್ಲ. ಹೆಸರಿಗೆ ಮಾತ್ರ ಶೌಚಗೃಹವಿದ್ದು, ಇದರಿಂದ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ತೊಂದರೆ ಉಂಟಾಗಿದೆ. ಲೋಕಸಭಾ ಚುನಾವಣೆ ನಿಮಿತ್ತ ಸರ್ಕಾರಿ ಶಾಲೆಗಳ ಶೌಚಗೃಹಗಳನ್ನು ದುರಸ್ತಿಗೊಳಿಸಿ ಸರಿಯಾಗಿ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆಯಿಂದ ನೋಡಿಕೊಳ್ಳುವಂತೆ ಗ್ರಾಪಂನವರಿಗೆ ಚುನಾವಣಾಧಿಕಾರಿಗಳು ತಿಳಿಸಿದರೂ ಗ್ರಾಪಂನವರು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆ ವಿಷಯ ತಿಳಿದ ಗ್ರಾಪಂ ಪಿಡಿಓ ನಾಗರಾಜ ಅಳಲಗೇರಿ ದೂರವಾಣಿ ಮೂಲಕ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಈಗಾಗಲೇ ಪೈಪ್ ಲೈನ್ ಹಾಕಿ ಸಿಂಟೆಕ್ಸ್ ಇಡಲಾಗಿದೆ. ಕೂಡಲೇ ಶೌಚಗೃಹ ದುರಸ್ತಿ ಪಡಿಸಿ ಮಕ್ಕಳಿಗೆ ಮುಕ್ತಗೊಳಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಹರಿಜನ, ಪ್ರಮುಖರಾದ ಸೋಮಣ್ಣ ಬಾಡಿನ, ಪರಮೇಶಪ್ಪ ಮೇಡ್ಲೇರಿ, ಶಂಬಣ್ಣ ಹೊನ್ನತ್ತಿ, ಹನುಮಂತಪ್ಪ ಓಲೇಕಾರ, ಮಹದೇವಪ್ಪ ಕುದರಿಹಾಳ, ಕರಬಸಪ್ಪ ಸಿದ್ದಾಳೆ, ಜಗದೀಶ ಓಲೇಕಾರ, ಬಸಪ್ಪ ಬಣಕಾರ ಮತ್ತಿತರರು ಇದ್ದರು.