ತಿರುವನಂತಪುರ: ಲಾಕ್ಡೌನ್ ನಡುವೆಯೂ ಶಿಕ್ಷಕಿ ಸರ್ಕಾರಿ ವಾಹನದಲ್ಲಿ ಕರ್ನಾಟಕದ ಮೂಲಕ ದೆಹಲಿಗೆ ಪ್ರಯಾಣ ಮಾಡುವ ವೇಳೆ ವಯನಾಡಿನ ಮಥಂಗಾದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಶಿಕ್ಷಕಿ ಏ. 21 ರಂದು ಪ್ರಯಾಣ ಆರಂಭಿಸಿ ಕರ್ನಾಟಕದ ಮೂಲಕ ದೆಹಲಿಗೆ ತೆರಳಲು ಮುಂದಾಗಿದ್ದರು. ಮಹಿಳೆ ಕೇರಳದಲ್ಲಿ ಅಂದಾಜು 465 ಕಿ.ಮೀ ದೂರ ಸಂಚರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಜಿಲ್ಲೆಯಿಂದ ಜಿಲ್ಲೆಗೆ ಸಂಚರಿಸಲು ಯಾರಿಗೂ ಅನುಮತಿ ನೀಡಿಲ್ಲ. ಆದರೆ ಶಿಕ್ಷಕಿ ಸರ್ಕಾರಿ ವಾಹನದ ಮೂಲಕ ಕೇರಳ ಗಡಿವರೆಗೆ ತೆರಳಿ ಅಲ್ಲಿಂದ ದೆಹಲಿಗೆ ಹೋಗಲು ನಿರ್ಧರಿಸಿದ್ದರು. ಹೀಗಾಗಿ ಇವರು ಸರ್ಕಾರಿ ವಾಹನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದ ತಿರುವನಂತಪುರದ ಪಾಟೋಮ್ನ ಕೇಂದ್ರೀಯ ಶಾಲೆಯ ಶಿಕ್ಷಕಿ ಅಬಕಾರಿ ಇಲಾಖೆಯ ವಾಹನದಲ್ಲಿ ತಾಮರಸರಿಯಿಂದ ವೈಯ್ನಾಡಿನ ಕಲ್ಪೆಟ್ಟಾಗೆ ಬಂದಿದ್ದಾರೆ. ಅಲ್ಲಿಂದ ಕರ್ನಾಟಕಕ್ಕೆ ಪ್ರವೇಶ ಮಾಡಲು ಮುಂದಾಗಿದ್ದರು ಎನ್ನುವ ಮಾಹಿತಿ ಇದೆ.
ಮಹಿಳೆ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಮಹಿಳೆ ಅನುಮತಿ ಇಲ್ಲದೆ 465 ಕಿ.ಮೀ. ದೂರ ಪ್ರಯಾಣಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಸರ್ಕಾರ ಲಾಕ್ಡೌನ್ ಅನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದೆ. ಇನ್ನು ಮುಂದೆ ಸರ್ಕಾರಿ ಅಧಿಕಾರಿಗಳು ಕೂಡ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ತೆರಳದಂತೆ ಸೂಚನೆ ನೀಡಿದೆ. (ಏಜೆನ್ಸೀಸ್)